ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಹೊಸ ಡಿಪಿಆರ್ ಸಿದ್ದಪಡಿಸಲು ಸಿಎಂ ಆದೇಶ

ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಹೊಸ ಡಿಪಿಆರ್ ಸಿದ್ದಪಡಿಸಲು ಸಿಎಂ ಆದೇಶ

ಬೆಂಗಳೂರು, ಜು.25- ಹರಿಹರ ತಾಲ್ಲೂಕಿನ ಮಹತ್ವಾಕಾಂಕ್ಷೆಯ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಯೋಜನೆಯ ಪೂರ್ಣ ಡಿಪಿಆರ್ ಸಿದ್ದಪಡಿಸಿ, ವರದಿ ಸಲ್ಲಿಸುವಂತೆ ಮತ್ತು ಅದಕ್ಕಾಗಿ 2.15 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಭೈರನಪಾದ ಏತ ನೀರಾವರಿ ಯೋಜನೆ, ಹರಿಹರ ತಾಲ್ಲೂಕಿನ ರೈತರಿಗೆ ತುಂಬಾ ಅಗತ್ಯವಿದ್ದು, ಯೋಜನೆಗೆ ಪ್ರಸಕ್ತ ಸಾಲಿನ ದರಪಟ್ಟಿಗೆ ಅನುಗುಣವಾಗಿ ಅಂದಾಜನ್ನು ಪರಿಷ್ಕರಿಸಿ, ಆಡಳಿತಾತ್ಮಕ ಮಂಜೂರಾತಿ ನೀಡುವುದರ ಜೊತೆಗೆ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದಾಗ, ಸಿಎಂ ಪೂರಕ ಸ್ಪಂದನೆ ನೀಡಿದ್ದಾರೆ ಎಂದು ಶ್ರೀನಿವಾಸ್ `ಜನತಾವಾಣಿ’ಗೆ ಮಾಹಿತಿ ನೀಡಿದರು.

ಹಿನ್ನೆಲೆ : ಮಲೇಬೆನ್ನೂರು ಶಾಖಾ ನಾಲೆಯಡಿ ಬರುವ 1632 ಹೆಕ್ಟೇರ್ ಬಾಧಿತ ಅಚ್ಚುಕಟ್ಟಿಗೆ ಸಮಪರ್ಕವಾಗಿ ನೀರು ಒದಗಿಸುವ ಹಿತದೃಷ್ಠಿಯಿಂದ ಅಂದು ಶಾಸಕರಾಗಿದ್ದ ಬಿ.ಪಿ.ಹರೀಶ್ ಅವರು, 2013ರಲ್ಲಿ ಗೋವಿನಹಾಳ್ ಸಮೀಪ ತುಂಗಭದ್ರಾ ನದಿಯಿಂದ ಭೈರನಪಾದ ಏತ ನೀರಾವರಿ ಯೋಜನೆಗೆ 43.75 ಕೋಟಿ ವೆಚ್ಚಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದಿದಿದ್ದರು. ಆದರೆ, ತಾಂತ್ರಿಕ ಸಲಹಾ ಸಮಿತಿ ಅನುಮತಿ ಸಿಗದ ಕಾರಣ ಮತ್ತು ಸರ್ಕಾರ ಅನುದಾನ ನೀಡದ ಕಾರಣ, ಈ ಯೋಜನೆ ನೆನೆಗುದಿಗೆ ಬಿದ್ದಿತು.

ನಂತರ, ಶಾಸಕ ಎಸ್.ರಾಮಪ್ಪ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒತ್ತಡ ಹಾಕಿ, ಕರ್ನಾಟಕ ನೀರಾವರಿ ನಿಗಮದ 101ನೇ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಯೋಜನೆಯನ್ನು 58.13 ಕೋಟಿ ರೂ.ಗಳಿಗೆ ಪರಿಷ್ಕರಿಸುವಂತೆ ಮಾಡಿದ್ದರು.

ತಾಂತ್ರಿಕ ಸಲಹಾ ಸಮಿತಿ ತೀರ್ಮಾನ ಪ್ರಕಾರ ಸರ್ಕಾರಕ್ಕೆ ಪರಿಷ್ಕೃತ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಜೊತೆಗೆ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಯೋಜನೆಯ ನಂತರ ಬಂದ ಸರ್ಕಾರಕ್ಕೆ ಯೋಜನೆಯ ಪರಿಷ್ಕೃತ ಪಟ್ಟಿಗೆ ಅನುಮೋದನೆ ಹಾಗೂ ಅನುದಾನ ನೀಡುವಂತೆ ಎಸ್.ರಾಮಪ್ಪ ಅವರು ಸಾಕಷ್ಟು ಒತ್ತಾಯ ಮಾಡುವುದರ ಜೊತೆಗೆ ವಿಧಾನಸಭೆಯಲ್ಲೂ ವಿಷಯ ಮಂಡನೆ ಮಾಡಿ, ಸರ್ಕಾರದ ಗಮನ ಸೆಳೆದಿದ್ದರು. ಆಗ ಸರ್ಕಾರ ಭರವಸೆ ನೀಡಿ, ಸುಮ್ಮನಾಯಿತು.

ನಂತರ ಈ ವಿಷಯ ಕಳೆದ ವರ್ಷ ನಡೆದ, ವಿಧಾನಸಭೆ ಚುನಾವಣೆ ಮತ್ತು ಇತ್ತೀಚೆಗೆ ನಡೆದ, ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಪ್ರಚಾರ ಪಡೆಯಿತು. ಹರಿಹರದಲ್ಲಿ ನಡೆದ ಲೋಕಸಬಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು, ಭೈರನಪಾದ ಏತ ನೀರಾವರಿ ಯೋಜನೆ ಜಾರಿಯಿಂದ ಹರಿಹರ ತಾಲ್ಲೂಕಿನ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಆಗುವ ಅನುಕೂಲದ ಬಗ್ಗೆ ತಿಳಿಸಿದ್ದರು.

ಆಗ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಭಾಷಣದಲ್ಲಿ ಚುನಾವಣೆ ನಂತರ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭೈರನಪಾದ ಏತ ನೀರಾವರಿ ಯೋಜನೆ ಜಾರಿ ಮಾಡುವಂತೆ ಗುರುವಾರ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿ, ಯೋಜನೆ ಕುರಿತು ಚರ್ಚಿಸಿದಾಗ ಸಿದ್ದರಾಮಯ್ಯ ಅವರು, ತಕ್ಷಣ ಸ್ಪಂದಿಸಿರುವುದು ಸಂತಸ ತಂದಿದೆ ಎಂದು ನಂದಿಗಾವಿ ಶ್ರೀನಿವಾಸ್ ಅವರು, ಈ ವರ್ಷದಲ್ಲೇ ಯೋಜನೆಗೆ ಚಾಲನೆ ಸೀಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈತರ ಹರ್ಷ : ಭೈರನಪಾದ ಏತ ನೀರಾವರಿ ಯೋಜನೆ ಜಾರಿಗಾಗಿ ಹೊಸ ಡಿಪಿಆರ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿರುವುದಕ್ಕೆ ಯಲವಟ್ಟಿಯ ಡಿ.ಯೋಮಕೇಶ್ವರಪ್ಪ, ಜಿ.ಆಂಜನೇಯ, ಜಿಗಳಿಯ ಜಿ.ಆನಂದಪ್ಪ, ಹೊಸಳ್ಳಿ ದ್ಯಾವಪ್ಪ ರೆಡ್ಡಿ, ಕೆ.ಎನ್.ಹಳ್ಳಿಯ ಗುಬ್ಬಿ ರಂಗನಾಥ್, ಸಿರಿಗೆರೆಯ ವಕೀಲ ಗಂಗಾಧರ್, ಮಲ್ಲೇಶಪ್ಪ, ನಿವೃತ್ತ ಯೋಧ ಪರಶುರಾಮ್, ದೇವೇಂದ್ರಪ್ಪ, ಭಾನುವಳ್ಳಿಯ ಕನ್ನಪ್ಪ, ಕರಿಯಪ್ಪ, ನಾರಾಯಣಪ್ಪ, ಬಸವರಾಜ್, ರೈತ ಸಂಘದ ಹಾಳೂರು ನಾಗರಾಜ್, ಕೆ.ಎನ್.ಹಳ್ಳಿ ಪ್ರಭುಗೌಡ, ಭಾನುವಳ್ಳಿ ಪ್ರಕಾಶ್, ವಾಸನದ ಬಿ.ಎಸ್.ಮಂಜುನಾಥ್, ಕೊಕ್ಕನೂರು ಸೋಮಶೇಖರ್, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ.ವಾಗೀಶ್ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಉಪಾಧ್ಯಕ್ಷ ಹನಗವಾಡಿ ಕುಮಾರ್ ಸೇರಿದಂತೆ ಕೊನೆ ಭಾಗದ ರೈತರು ಹರ್ಷ ವ್ಯಕ್ತಪಡಿಸಿ, ಆದಷ್ಟು ಬೇಗನೇ ಯೋಜನೆಯ ಕಾಮಗಾರಿಗೆ ಚಾಲನೆ ಸಿಗಲಿ ಎಂದು ಒತ್ತಾಯಿಸಿದ್ದಾರೆ.

error: Content is protected !!