ದಾವಣಗೆರೆ, ಜು. 25 – ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣವೇ ನೀರು ಹರಿಸಬೇಕೆಂದು ಭಾರತೀಯ ರೈತ ಒಕ್ಕೂಟ ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಒಕ್ಕೂಟ, ಕಳೆದ ಜು.23ರಂದು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆ ಬಗ್ಗೆ ಚರ್ಚಿಸಲಾಗಿತ್ತು. ಉಪ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜು.24 ರಂದು ಸಭೆ ನಡೆಯಲಿದೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ, ಈಗ ಸಭೆಯನ್ನು ಆಗಸ್ಟ್ 5ಕ್ಕೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.
ಭದ್ರಾ ನಾಲೆಗಳಿಗೆ ನೀರು ಹರಿಸುವ ಸಭೆಯನ್ನು ವಿಳಂಬ ಮಾಡಿರುವುದು ರೈತ ವಿರೋಧಿ ನೀತಿಯಾಗಿದೆ. ಈ ತಿಂಗಳ ಕೊನೆಗೆ ಅಣೆಕಟ್ಟು ತುಂಬಿ ನೀರು ಹೆಚ್ಚುವರಿಯಾಗಿ ಹರಿದು ಹೋಗಲಿದೆ. ಕಾಲುವೆಗೆ ಈಗಲೇ ನೀರು ಬಿಟ್ಟರೆ ಅಚ್ಚುಕಟ್ಟಿನ ಕೆರೆಗಳು ತುಂಬುತ್ತವೆ. ಈಗಲೇ ನಾಟಿ ಮಾಡಿದರೆ ಚಳಿಗಾಲ ಹಾಗೂ ಮೂಡುಗಾಳಿಗೆ ಸಿಲುಕಿ ಭತ್ತದ ಇಳುವರಿ ಕುಂಠಿತವಾಗುವುದು ತಪ್ಪುತ್ತದೆ ಎಂದು ಒಕ್ಕೂಟ ತಿಳಿಸಿದೆ.
ಈಗಲೇ ನೀರು ಹರಿಸಿದರೆ, ಮಳೆಗಾಲ ಮುಗಿದ ಮೇಲೂ ಅಣೆಕಟ್ಟೆಯಲ್ಲಿ ಪೂರ್ಣ ಪ್ರಮಾಣದ ನೀರು ನಿಲ್ಲುತ್ತದೆ. ಇಷ್ಟಾದರೂ, ನಾಲೆಗಳಿಗೆ ನೀರು ಹರಿಸುವುದು ವಿಳಂಬ ಮಾಡಿದರೆ, ಕುಡಿಯುವ ನೀರು ಹಾಗೂ ಬೇಸಿಗೆ ಬೆಳೆಗೆ ತೊಂದರೆಯಾಗಲಿದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಒಕ್ಕೂಟದ ಗೌರವಾಧ್ಯಕ್ಷರೂ, ಮಾಜಿ ಸಚಿವರೂ ಆದ ಎಸ್.ಎ. ರವೀಂದ್ರನಾಥ್, ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್. ನಾಗ ರಾಜ್ ರಾವ್ ಕೊಂಡಜ್ಜಿ, ಎ.ಎಂ. ಮಂಜುನಾಥ್, ಮಹೇಶ್ವರಪ್ಪ, ಪಿ.ವಿ. ರವಿಕುಮಾರ್, ಎ.ಬಿ. ಕರಿಸಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.