ಕರ್ನಾಟಕಕ್ಕೆ ಹೂರಣವಿಲ್ಲದ ಹೋಳಿಗೆ ನೀಡಿದ ಕೇಂದ್ರ

ಕರ್ನಾಟಕಕ್ಕೆ ಹೂರಣವಿಲ್ಲದ ಹೋಳಿಗೆ ನೀಡಿದ ಕೇಂದ್ರ

ದಾವಣಗೆರೆ, ಜು. 23- ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹೂರಣವಿಲ್ಲದ ಹೋಳಿಗೆ ನೀಡಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಬಜೆಟ್ ಕುರಿತು ಟೀಕಿಸಿದ್ದಾರೆ.

ದೇಶದ 28 ರಾಜ್ಯಗಳ ಪೈಕಿ ಕೆಲವೇ ರಾಜ್ಯಗಳಿಗೆ ಸೀಮಿತವಾದ ಬಜೆಟ್ ಇದಾಗಿದೆ.  ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಕಳೆದ 10 ಬಾರಿಯೂ ಕರ್ನಾಟಕ ರಾಜ್ಯಕ್ಕೆ ತೋರಿದ ಮಲತಾಯಿ ಧೋರಣೆಯನ್ನು 11ನೇ ಬಜೆಟ್‍ನಲ್ಲಿಯೂ ಮುಂದುವರೆಸಿದೆ ಎಂದು ಹೇಳಿದ್ದಾರೆ.  ರಾಜ್ಯದ ಯಾವುದೇ ನೀರಾವರಿ ಯೋಜನೆಗಳಿಗೆ ಹಾಗೂ ಎ.ಐ.ಐ.ಎಂ.ಎಸ್. ಅನುದಾನ ತರುವಲ್ಲಿ ರಾಜ್ಯದಿಂದ ಆಯ್ಕೆಗೊಂಡ ಕೇಂದ್ರದ ಸಚಿವರುಗಳು ವಿಫಲರಾಗಿದ್ದಾರೆ. ಪ್ರತೀ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಈಗ ಕೇವಲ 0.75 ಕೋಟಿ  ಉದ್ಯೋಗ ಸೃಷ್ಠಿ ಮಾಡುತ್ತೇವೆ ಎನ್ನುವ ಮೂಲಕ  ಅಭಿವೃದ್ಧಿಯಂತೆ ಉದ್ಯೋಗ ಸೃಷ್ಠಿಯಲ್ಲೂ ಹಿನ್ನಡೆಯತ್ತ ಸಾಗುತ್ತಿದೆ. ಹೊಸದಾಗಿ 100 ನಗರಗಳಲ್ಲಿ ಕೈಗಾರಿಕಾ ಪಾರ್ಕ್‍ಗೆ ಉತ್ತೇಜನ ನೀಡುತ್ತೇವೆ ಎನ್ನುವ ಯೋಜನೆ ಈಗಾಗಲೇ ವಿಫಲವಾಗಿರುವ 100 ಸ್ಮಾರ್ಟ್ ಸಿಟಿ ಯೋಜನೆಯ ದಾರಿ ಹಿಡಿಯದಿರಲಿ ಎಂದವರು ಹೇಳಿದ್ದಾರೆ.  ಕರ್ನಾಟಕದಲ್ಲಿರುವ ಕೆಲವು ರಾಜ್ಯ ಹೆದ್ದಾರಿಗಳನ್ನು ಉನ್ನತೀಕರಿಸಿ, ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವುದನ್ನು ಕೇಂದ್ರ ಸರ್ಕಾರ ಮರೆತಿದೆ.

ರಾಜ್ಯಗಳ ಜಿ.ಎಸ್.ಟಿ. ಪಾಲನ್ನು ಬೇಡಿಕೆಗೆ ಅನುಗುಣವಾಗಿ ನೀಡುವುದರ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಶಿಕ್ಷಣ ಮತ್ತು ಆರೋಗ್ಯದತ್ತ ಗಮನ ಹರಿಸಿಲ್ಲ. ಮಕ್ಕಳ ಕಾಳಜಿ, ಗ್ರಾಮೀಣ ನಿರುದ್ಯೋಗ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. 

ಕೃಷಿ ವಲಯದ ಅನುದಾನವನ್ನು ಕಳೆದ 5 ವರ್ಷಗಳಲ್ಲಿ 4.97% ನಿಂದ 2.74%ಗೆ ಇಳಿಸಿರುವುದು  ರೈತರ ಬಗ್ಗೆ ಎನ್.ಡಿ.ಎ. ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದು ತೋರುತ್ತದೆ.  ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಡಾ.ಪ್ರಭಾ ಟೀಕಿಸಿದ್ದಾರೆ.

error: Content is protected !!