ಸುಸ್ಥಿರ ಅಭಿವೃದ್ಧಿಗಾಗಿ ನೀರಿನ ನಿರ್ವಹಣೆ ಕಾರ್ಯಾಗಾರದಲ್ಲಿ ಡಾ.ಮಹಾಂತೇಶ್
ದಾವಣಗೆರೆ, ಜು. 24- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡಲು ಪ್ರತಿ ವರ್ಷ ಸುಮಾರು 26 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಆದರೆ ನಾಗರಿಕರು ನೀರಿನ ತೆರಿಗೆ ಅಂದಾಜು 300 ರೂ. ಕಟ್ಟಲು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದಾಗಿ 15-20 ಕೋಟಿ ರೂ.ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇ ಶಕ ಡಾ.ಮಹಾಂತೇಶ್ ಎನ್. ಹೇಳಿದರು.
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಿಂದ ಸುಸ್ಥಿರ ಅಭಿವೃದ್ಧಿಗಾಗಿ ನೀರಿನ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನೀರು ನಿರ್ವಹಣೆ ಕಾರ್ಯ ಕೇವಲ ಮಹಾನಗರ ಪಾಲಿಕೆ ಅಥವಾ ಸರ್ಕಾರದ ಕೆಲಸವಲ್ಲ. ಪ್ರತಿ ನಾಗರಿಕರು ಕೈ ಜೋಡಿಸಬೇಕು. ನಾವು ಉಳಿಸುವ ನೀರು ಮುಂದಿನ ಪೀಳಿಗೆಗೆ ನಾವು ನೀಡುವ ದೊಡ್ಡ ಕೊಡುಗೆ ಎಂದು ಹೇಳಿದರು.
ಪಾಲಿಕೆಯಿಂದ ಪೂರೈಸುವ ನೀರನ್ನು ಯಥೇಚ್ಚವಾಗಿ ಪೋಲು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಜಲಸಿರಿ ಯೋಜನೆ ಯಡಿ ಮೀಟರ್ ಅಳವಡಿಸಲಾಗುತ್ತಿದೆ. ಇದರಿಂದ ಅನಗತ್ಯವಾಗಿ ನೀರು ಪೋಲು ಮಾಡುವುದು ತಪ್ಪುತ್ತದೆ ಎಂದರು.
ಮಳೆಗಾಲದಲ್ಲಿ ಸಾಕಷ್ಟು ನೀರು ಹರಿಯಲು ಬಿಟ್ಟು, ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರಿತಪಿಸಬೇಕಾಗಿದೆ. ಕಳೆದ ಬೇಸಿಗೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಪೂರೈಸಲು ಸಾಕಷ್ಟು ಶ್ರಮ ಪಡಬೇಕಾಯಿತು. ಅನೇಕ ಕಡೆ ಹಣ ಕೊಟ್ಟು ಟ್ಯಾಂಕರ್ ನೀರು ಬಳಸಿದರು. ಆದಾಗ್ಯೂ ನೀರು ಪೋಲು ಮಾಡುವುದು ತಪ್ಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನೀರು ಇದ್ದ ಕಡೆ ನಾಗರಿಕತೆ ಸೃಷ್ಟಿಯಾಗು ತ್ತದೆ. ನೀರು ಇಲ್ಲ ಎಂದರೆ ಜೀವನವೇ ಇಲ್ಲ. ನೀರಿನ ಪ್ರಾಮುಖ್ಯತೆಯನ್ನು ಯುವಕ-ಯುವತಿಯರು ತಿಳಿಯಬೇಕು. ವೈಜ್ಞಾನಿಕ ವಾಗಿ ನೀರಿನ ಬಳಕೆ ಬಗ್ಗೆ ಅರಿಯಬೇಕು. ಗಿಡ-ಮರಗಳನ್ನು ಬೆಳೆಸಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಕರೆ ನೀಡಿದರು.
ಯುಬಿಡಿಟಿ ಪ್ರಾಂಶುಪಾಲ ಡಾ.ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ಕೆಎಸ್‌ಪಿ ಎಸ್ ಪ್ರಾದೇಶಿಕ ಅಧಿಕಾರಿ ಡಾ.ಹೆಚ್.ಲಕ್ಷ್ಮೀಕಾಂತ್, ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್. ಹನುಮಂತಪ್ಪ ಪ್ರಾರ್ಥಿಸಿ ದರು. ಡಾ.ಎಸ್. ಮಂಜಪ್ಪ ಅತಿಥಿಗಳನ್ನು ಸ್ವಾಗತಿಸಿದರು. ಜೆ.ಕೆ. ಲಕ್ಷ್ಮಿ, ದಿವ್ಯ ಆರ್.ಹಾನಗಲ್ ಅತಿಥಿಗಳನ್ನು ಪರಿಚಯಿಸಿದರು. ಡಾ.ಎಂ.ಹೆಚ್. ದಿವಾಕರ್ ವಂದಿಸಿದರು. ಡಾ.ರೇಷ್ಮ ಶೆಟ್ಟಿ ನಿರೂಪಿಸಿದರು.