ಯುವಕರು ಪೊಲೀಸ್‌ ಇಲಾಖೆಗೆ ಸಹಕರಿಸಿ

ಯುವಕರು ಪೊಲೀಸ್‌ ಇಲಾಖೆಗೆ ಸಹಕರಿಸಿ

ದಾವಣಗೆರೆ, ಜು.22- ದೇಶದ ಸದೃಢತೆಗೆ ಯುವ ಶಕ್ತಿಗಳು ಸನ್ನದ್ಧರಾಗಿ ಸಮಾಜ ಘಾತುಕ ಶಕ್ತಿಗಳ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುವಕರು ದೇಶದೊಳಗೆ ಸಾಮಾಜಿಕ ಸುಧಾರಣೆ ತರುವ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.

ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು, ಯುವಕರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುವುದಲ್ಲದೆ, ಕುಟುಂಬದ ಆರ್ಥಿಕತೆ ಹಾಗೂ ಸಮಾಜದ ಆರ್ಥಿಕತೆಯ ಮೇಲೆ ನಷ್ಟ ತರುತ್ತಿದೆ ಎಂದು ಆತಂಕ ಪಟ್ಟರು. ದೇಶದ ಯುವಕರಲ್ಲಿ ಆಡಳಿತ ಬದಲಾಯಿಸುವ ಕ್ರಿಯಾತ್ಮಕ ಶಕ್ತಿ ಇದೆ. ಆದ್ದರಿಂದ ದೇಶದ ಉಜ್ವಲತೆಗಾಗಿ ಯುವಕರು ಶ್ರಮವಹಿಸಬೇಕು ಎಂದರು.

ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ನೀಡುವ ಪೋಸ್ಟ್‌, ಫೇಕ್ ನ್ಯೂಸ್ ಮತ್ತು ಇನ್ನಾವುದೇ  ಅಚಾತುರ್ಯ ಘಟನೆಯಲ್ಲಿ ಭಾಗಿಯಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಪೊಲೀಸ್‌ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಪೊಲೀಸ್ ಠಾಣೆ ಮುಂದೆ ಅಳವಡಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅವರ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಹೆಚ್ಚುವರಿ ರಕ್ಷಣಾಧಿಕಾರಿ ವಿಜಯ್‍ಕು ಮಾರ್ ಎಂ.ಸಂತೋಷ್‌ ಮಾತನಾಡಿ, ಸಮಾಜದಲ್ಲಿ ಕೆಡುಕು ಬಯಸುವವರ ಮಾಹಿತಿ ನೀಡಲು ಪ್ರತಿಯೊಂದು ಗ್ರಾಮ ಮತ್ತು ಜಿಲ್ಲಾ ಠಾಣೆಯಲ್ಲಿ ಯುವ ಸಮಿತಿ ರಚನೆ ಮಾಡ ಲಾಗಿದ್ದು, ಸಮಾಜ ಘಾತುಕ ಕೃತ್ಯ, ಮಾದಕ ವಸ್ತು ಮಾರಾಟ, ಜೂಜಾಟ, ಅಹಿತಕರ ಘಟನೆ ಬಗ್ಗೆ ನಿಖರ ಮಾಹಿತಿ ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ. ಮಂಜುನಾಥ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಇತರೆ ಅಧಿಕಾರಿಗಳು ಮತ್ತು ಯುವಕರು ಇದ್ದರು.

error: Content is protected !!