ನಾಟಕ ವೀಕ್ಷಣೆಯಿಂದ ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆ

ನಾಟಕ ವೀಕ್ಷಣೆಯಿಂದ ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆ

ದಾವಣಗೆರೆ, ಜು. 18- ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸುವಲ್ಲಿ `ರಾಮಾಯಣ’ ದಂತಹ ನಾಟಕ ಪ್ರದರ್ಶನಗಳು ಸಹಕಾರಿಯಾಗಲಿವೆ. ಪೌರಾಣಿಕ ನಾಟಕಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿವೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ದಂತ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ವೃತ್ತಿ ರಂಗಭೂಮಿ ರಂಗಾಯಣ, ಬಾಪೂಜಿ ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್.ಎಸ್. ಕೇರ್  ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಮಕ್ಕಳ ನಾಟಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಟಕಗಳು ಮಕ್ಕಳ ಮನಸ್ಸನ್ನು ಮುದಗೊಳಿಸುವುದಲ್ಲದೇ ವ್ಯಕ್ತಿತ್ವ, ನಡವಳಿಕೆಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತವೆ. ಪ್ರಸ್ತುತ ಮಕ್ಕಳಿಗೆ ರಂಗಭೂಮಿ ಪರಿಚಯಿಸುವ ಅಗತ್ಯವಿದೆ ಎಂದರು.

ನಾಟಕಗಳಲ್ಲಿ ಮಕ್ಕಳೇ ಅಭಿನಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಟಕಗಳನ್ನು ನೋಡುವುದರಿಂದ ಮಕ್ಕಳ ಮನಃಪರಿವರ್ತನೆಯಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸಬೇಕಾಗಿದೆ. ಶಿಸ್ತು, ಕಠಿಣ ಪರಿಶ್ರಮ ಇದ್ದರೆ ಸಾಧನೆ ಸುಲಭವಾಗುತ್ತದೆ. ಮಕ್ಕಳಿಗೆ ಕಲಿಕೆಗೆ ಉತ್ತೇಜನ ನೀಡ ಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ, ರಂಗ ಸಂಘಟಕರಾದ ಪ್ರೊ. ಹಾಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರವಿಚಂದ್ರ, ರಂಗಕರ್ಮಿ ಎಸ್.ಎಸ್. ಸಿದ್ಧರಾಜು ಮತ್ತಿತರರು ಭಾಗವಹಿಸಿದ್ದರು.

ನಾಟಕೋತ್ಸವದ ಮೊದಲ ದಿನವಾದ ಇಂದು ಬಿ.ಆರ್. ವೆಂಕಟರಮಣ ಐತಾಳ್ ಅವರು ರಚಿಸಿರುವ, ಗಣೇಶ್ ಮಂದಾರ್ತಿ ಅವರ ಸಂಗೀತ, ವಿನ್ಯಾಸ ಮತ್ತು ನಿರ್ದೇಶನದಲ್ಲಿ `ಮಕ್ಕಳ ರಾಮಾಯಣ’ ನಾಟಕ ಪ್ರದರ್ಶನಗೊಂಡಿತು. 

ಬೈಂದೂರಿನ ಸುರಭಿ ಮಕ್ಕಳ ರಂಗ ತಂಡದ 25 ಬಾಲ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ನಾಳೆ ದಿನಾಂಕ 19 ರ ಶುಕ್ರವಾರ `ಕರ್ಣಾರ್ಜುನ ಕಾಳಗ’, ನಾಡಿದ್ದು ದಿನಾಂಕ 20 ರ ಶನಿವಾರ `ಸಿದಿಧಾನ್ಯವೇ ಸರಿಧಾನ್ಯ’ ನಾಟಕಗಳು ಪ್ರದರ್ಶನಗೊಳ್ಳಲಿವೆ. 

ಸೀತಮ್ಮ ಬಾಲಕಿಯರ ಸರ್ಕಾರಿ  ಪ್ರೌಢಶಾಲೆ, ಸಿದ್ಧಗಂಗಾ ಪ್ರೌಢಶಾಲೆ, ಮೋತಿ ವೀರಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಪೂಜಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಟಕ ವೀಕ್ಷಿಸಿದರು.

error: Content is protected !!