ನಗರದಲ್ಲಿ ಭಾವೈಕ್ಯತೆಯ ಮೊಹರಂ `ಯಾದೇ ಹುಸೇನ್’ ಆಚರಣೆ

ನಗರದಲ್ಲಿ ಭಾವೈಕ್ಯತೆಯ ಮೊಹರಂ  `ಯಾದೇ ಹುಸೇನ್’ ಆಚರಣೆ

ದಾವಣಗೆರೆ, ಜು.17- ಚಂದ್ರ ದರ್ಶನದಿಂದ ಪ್ರಾರಂಭವಾಗಿರುವ ಮುಸ್ಲಿಂ ಬಾಂಧವರ ಹೊಸ ವರ್ಷದ ಸಂಕೇತವಾಗಿರುವ ಮೊಹರಂ ಹಬ್ಬ `ಯಾದೇ ಹುಸೇನ್’ ಅನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಇಂದು ನಗರದಲ್ಲಿ ಶ್ರದ್ಧಾ- ಭಕ್ತಿಯಿಂದ ಆಚರಿಸಿದರು.

ಮೊಹರಂ ಅಂಗವಾಗಿ ವಿವಿಧ ಪ್ರದೇಶಗಳಲ್ಲಿ ಕುರುಹೀನ ಮಾಡಿದ್ದ ಅಲಾಯಿ ದೇವರು (ಪಂಜಾಗಳು) 8ನೇ ದಿನ ಹಾಗೂ ಹತ್ತನೇ ದಿನವಾದ ಇಂದು ನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದವು. ಇದೇ ಸಂದರ್ಭದಲ್ಲಿ ಹರಕೆ ಹೊತ್ತಿದ್ದ ಭಕ್ತಾದಿಗಳು, ಪಂಜಾಗಳಿಗೆ ನಿಂಬೆ ಹಣ್ಣಿನ ಸರ, ಕರಿಮೆಣಸು ಮಂಡಕ್ಕಿ, ಅರ್ಪಿಸಿ ಪುನೀತರಾದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

ಸಾಯಂಕಾಲ ಹೊಂಡದ ವೃತ್ತ ಬಳಿ ಇರುವ ಹಜರತ್ ಸೈಯದ್ ರತನ್ ಷಾವಲಿ ಬಾಬಾರವರ ದರ್ಗಾ ಆವರಣದಲ್ಲಿ ಸಾಮೂಹಿಕವಾಗಿ ಸೇರಿಕೊಂಡು ಗಂಟುಗಳನ್ನು ಕಟ್ಟಿಕೊಂಡು ಶ್ಲೋಕಗಳನ್ನು ಓದುತ್ತಾ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿ ಮೊಹರಂನ ಹತ್ತನೇ ದಿನಕ್ಕೆ ತೆರೆ ಎಳೆದರು.

ಯಾದೇ ಹುಸೇನ್ ಅಂಗವಾಗಿ ನಗರದ ಮಸೀದಿಗಳಲ್ಲಿ ಪ್ರಾರ್ಥನೆ ಯೊಂದಿಗೆ `ಯೌಮೇ ಅಶುರಾ’ ಪಠಿಸಲಾಯಿತು. ಫಾತೇ ಹಾಖಾನಿ ನಂತರ ಸಿಹಿ ಹಾಗೂ `ಖಿಚಡಾ’ ವಿನಿಯೋಗಿಸಲಾಯಿತು. ಜಿಲ್ಲಾದ್ಯಂ ತ ವಿವಿಧ ಸಂಘ – ಸಂಸ್ಥೆಗಳ ವತಿಯಿಂದ ಷರಬತ್ ಹಾಗೂ ಸಿಹಿ ಸಾರ್ವಜನಿಕರಿಗೆ ವಿತರಿಸಿದರು. ಭಾವೈಕ್ಯತೆಯ ಪ್ರತಿಬಿಂಬವಾಗಿರುವ ಮೊಹರಂ ಹಬ್ಬವು, ಗ್ರಾಮೀಣ ಪ್ರದೇಶದಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಸೇರಿಕೊಂಡು ಆಚರಿಸಿದರು.

ಆಜಾದ್ ನಗರ, ಭಾಷಾನಗರ, ವಿನೋಬನಗರ, ಕೆಟಿಜೆ ನಗರ, ಜಾಲಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಯಾದೇ ಹುಸೇನ್ ಅಂಗವಾಗಿ ಕಳೆದ 10 ದಿನಗಳಿಂದ ತಕರೀರ್ (ಉಪನ್ಯಾಸ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನೂರಾನಿ ಆಟೋ ಸ್ಟಾಂಡ್ : ಆಟೋ ಚಾಲಕರ ಸಂಘದ ವತಿಯಿಂದ ಕಳೆದ 51 ವರ್ಷಗಳಿಂದ ಆಚರಿಸು ತ್ತಿರುವ `ಜಶ್ನೇ ಯಾದೇ ಹುಸೇನ್’ ತಖರೀರ್ ಇಂದು ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದ ಅಲ್ಪತಾ ಅಬ್ದುಲ್ ರಹಮಾನ್ ಇದೇ ಸಂದರ್ಭದಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡು ತಾಯ್ನಾಡಿಗೆ ಮರಳಿದ ಹಜ್ ಯಾತ್ರಿಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.

error: Content is protected !!