ದುರಸ್ತಿಯಾಗದ ಭದ್ರಾ ಜಲಾಶಯ ಅನುದಾನ ಬಿಡುಗಡೆಗೆ ಒತ್ತಾಯ

ದುರಸ್ತಿಯಾಗದ ಭದ್ರಾ ಜಲಾಶಯ ಅನುದಾನ ಬಿಡುಗಡೆಗೆ ಒತ್ತಾಯ

ದಾವಣಗೆರೆ, ಜು. 17- ರೈತರ ಜೀವನಾಡಿ ಯಾಗಿರುವ ಭದ್ರಾ ಜಲಾಶಯ ದುರಸ್ತಿಗೆ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 2006-07 ರಲ್ಲಿ 900 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಭದ್ರಾ ಜಲಾಶಯಕ್ಕೆ ಆಧುನಿಕ ಸ್ಪರ್ಶ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈವರೆಗೂ ದುರಸ್ತಿ ಬಗ್ಗೆ ಚಕಾರವೆತ್ತಿಲ್ಲ. ಜಂಗಲ್ ಕ್ಲೀನ್ ಮಾಡಿಸಿಲ್ಲ ಎಂದು ಆರೋಪಿಸಿದರು.

ಭದ್ರಾ ಜಲಾಶಯದಿಂದ ದಿನ ನಿತ್ಯ 4 ರಿಂದ 5 ಸಾವಿರ ಕ್ಯೂಸೆಕ್ಸ್ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದಾಗ, ನಾವು ಅಧಿಕಾರಿಗಳಿಗೆ ಕರೆ ಮಾಡಿ ಸರಿಪಡಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರಿಂದ ತೇಪೆ ಹಾಕುವ ಕೆಲಸ ಮಾತ್ರ ಮಾಡಿದ್ದಾರೆ. ಎಮರ್ಜೆನ್ಸಿ ಗೇಟ್‌ಗೆ ಬೆಡ್ ಕಾಂಕ್ರಿಟ್ ಹಾಕಿಲ್ಲ. ಆದ್ದರಿಂದ ಈಗಲೂ ಪ್ರತಿದಿನ 500 ರಿಂದ 600 ಕ್ಯೂಸೆಕ್ಸ್ ನೀರು ಸೋರಿಕೆಯಾಗುತ್ತಿದೆ ಎಂದರು.

ಅಧಿಕಾರಿಗಳು ಮಾತ್ರ ಕೇವಲ 200 ಕ್ಯೂಸೆಕ್ಸ್ ಲೀಕೇಜ್ ಆಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ 100 ರಿಂದ 150 ಕೋಟಿ ರೂ. ಬಿಡುಗಡೆ ಮಾಡಿ ಶಾಶ್ವತ ದುರಸ್ತಿಗೆ ಮುಂದಾಗಬೇಕೆಂದು ಆಗ್ರಹಿಸಿದರು.

ಬಿಜೆಪಿ ಯುವ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಭದ್ರಾ ಅಧಿಕಾರಿಗಳ ಅರಾಜಕತೆಯಿಂದಾಗಿ ಇದುವರೆಗೂ ಒಂದು ಸಾವಿರ ಕೆರೆಗಳು ತುಂಬುವಷ್ಟು ನೀರು ಸೋರಿಕೆಯಾಗಿದೆ. ಇದಕ್ಕೆ ರಿವರ್ ಸ್ಲೀವ್ಸ್ ದುರಸ್ತಿಗೆ ಈ ಹಿಂದೆ 90 ಲಕ್ಷ ರೂ. ಕಾಮಗಾರಿ  ಗುತ್ತಿಗೆ ಪಡೆದಿರುವವರು ತೇಪೆ ಹಾಕಿರುವುದೇ ಸೋರಿಕೆಗೆ ಕಾರಣವಾಗಿದೆ ಎಂದು ಕಿಡಿಕಾರಿದರು.

ಇದನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಜಲಾಶಯದಲ್ಲಿ ನೀರು ಬಂದು ಸೋರಿಕೆಯಾದಾಗಲೇ ಗೊತ್ತಾಗಿರುವುದು. ಅಧಿಕಾರಿಗಳ ನಿರ್ಲಕ್ಷ್ಯೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಸರ್ಕಾರ ಕೂಡಲೇ ಐಸಿಐಸಿ ಸಭೆ ಕರೆದು ನೀರು ಬಿಡುಗಡೆಯ ವೇಳಾಪಟ್ಟಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ಜಿ. ಅಜಯ್ ಕುಮಾರ್, ಪ್ರವೀಣ್ ಜಾಧವ್, ಧನಂಜಯ ಕಡ್ಲೇಬಾಳು, ಹಾಲೇಶನಾಯ್ಕ, ಹೆಚ್.ಬಿ.ಮಲ್ಲಿಕಾರ್ಜುನ್, ರಾಜು, ಸುಣಿಗೆರೆ ಕುಮಾರಪ್ಪ ಉಪಸ್ಥಿತರಿದ್ದರು.

error: Content is protected !!