ಉಪನ್ಯಾಸ ಮಾಲಿಕೆ, ನೂತನ ಅಪರಾಧಿಕ ಕಾನೂನು ಕೈಪಿಡಿ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ
ಡಾ.ಡಿ.ವಿ. ಗುರುಪ್ರಸಾದ್
ದಾವಣಗೆರೆ, ಜು.15- ದೇಶದಲ್ಲಿನ ಹಳೇ ಕಾನೂನು ದಂಡಕ್ಕೆ ಪ್ರಾಮುಖ್ಯತೆ ನೀಡಿದರೆ ಇಂದಿನ ಹೊಸ ಕಾನೂನುಗಳು ನ್ಯಾಯಕ್ಕೆ ಪ್ರಾಮುಖ್ಯತೆ ನೀಡಿವೆ ಎಂದು ಐಪಿಎಸ್ ಡಾ.ಡಿ.ವಿ. ಗುರುಪ್ರಸಾದ್ ತಿಳಿಸಿದರು.
ಜಿಲ್ಲಾ ವಕೀಲರ ಸಂಘದಿಂದ ಆರ್.ಎಲ್. ಕಾನೂನು ಕಾಲೇಜು ಮತ್ತು ಲಾಯರ್ ಕಾನೂನು ಪಬ್ಲಿಷರ್ಸ್ ಆಶ್ರಯ ದಲ್ಲಿ ನಗರದ ಜಿಲ್ಲಾ ಕೋರ್ಟ್ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ 10ನೇ ಉಪನ್ಯಾಸ ಮಾಲಿಕೆ ಮತ್ತು ಪುಸ್ತಕ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ 3 ನೂತನ ಕಾನೂನನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗಲಿದ್ದು, ನಿರಂತರ ಅಭ್ಯಾಸದಿಂದ ಮಾತ್ರ ಕಾನೂನು ಪರಿಚಯವಾಗಲಿದೆ ಎಂದು ಹೇಳಿದರು.
ಹಳೆಯ ಕಾನೂನಿನಲ್ಲಿದ್ದ ದಂಡ ಮತ್ತು ಮರಣ ದಂಡನೆ ಶಿಕ್ಷೆ ಹೊಸ ಕಾನೂನಿನಲ್ಲಿ ಮುಂದುವರೆದಿವೆ. ಕೆಲವು ಸಣ್ಣ-ಪುಟ್ಟ ಅಪರಾಧ ಗಳಿಗೆ `ಕಮ್ಯೂನಿಟಿ ಸರ್ವೀಸ್’ ಎಂಬ ಹೊಸ ಶಿಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಕಮ್ಯೂನಿಟಿ ಸರ್ವೀಸ್ ಬಗ್ಗೆ ವ್ಯಾಖ್ಯಾನ ಇಲ್ಲದ್ದರಿಂದ, ನ್ಯಾಯಾಧೀಶರಿಗೆ ಶಿಕ್ಷೆ ವಿಧಿಸುವಾಗ ಹಲವು ಗೊಂದಲಗಳು ಎದುರಾಗುತ್ತವೆ ಎಂದು ತಿಳಿಸಿದರು.
ತನಿಖೆಯು ವೈಜ್ಞಾನಿಕವಾಗಿರಬೇಕು ಎಂಬ ದೃಷ್ಟಿಯಿಂದ ಕಾನೂನಿನಲ್ಲಿ ತಾಂತ್ರಿಕ ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೀರೋ ಎಫ್ಐಆರ್ ವ್ಯವಸ್ಥೆಯ ಮೂಲಕ ದೇಶದ ಎಲ್ಲಿಂದಾದರೂ ದೂರು ದಾಖಲಿಸ ಬಹುದಾಗಿದ್ದು, ದೂರು ಸಲ್ಲಿಸಿದ 3 ದಿನದ ಒಳಗೆ ಸಹಿ ಮಾಡಲು ಹೋಗಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ದಿನವೊಂದಕ್ಕೆ 25 ಫೋನ್ ಕರೆಗಳಷ್ಟು ಸುಳ್ಳು ದೂರು ಬರುತ್ತಿರುವುದನ್ನು ನಿರ್ವಹಣೆ ಮಾಡುವುದು ಪೊಲೀಸರಿಗೆ ಸವಾಲಿನ ಕಾರ್ಯವಾಗಿದೆ ಮತ್ತು ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ ಎಂದರು.
ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್.ಯತೀಶ್ ಮಾತನಾಡಿ, ಹೊಸ ಕಾನೂನಿನ ಬದಲಾವಣೆ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು `ನೂತನ ಅಪರಾಧಿಕ ಕಾನೂನುಗಳ ಕೈಪಿಡಿ’ ಪುಸ್ತಕ ಲೋಕಾರ್ಪಣೆ ಮಾಡಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಹಿರಿಯ-ಕಿರಿಯ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿದ್ದರು.