ಆಶ್ವಾಸನೆ ಬೇಡ, ಹೆಸರು ಸೂಚಿಸಿ : ಬಿ. ವಾಮದೇವಪ್ಪ

ಆಶ್ವಾಸನೆ ಬೇಡ, ಹೆಸರು ಸೂಚಿಸಿ : ಬಿ. ವಾಮದೇವಪ್ಪ

ಟಿ. ಗಿರಿಜಾ ಅವರ ಸವಿನೆನಪಿಗೆ ನಗರದ ರಸ್ತೆಗೆ ಪಾಲಿಕೆ ಹೆಸರು ಸೂಚಿಸಿ, ಗೌರವಿಸಬೇಕಿದೆ

ಇಂದಿನ ದಿನಮಾನಗಳಲ್ಲಿ ಓದುಗರ ಸಂಖ್ಯೆ ಕ್ಷೀಣಿಸಿದ್ದರಿಂದ ಪುಸ್ತಕ ಕೊಳ್ಳುವವರ ಸಂಖ್ಯೆ ಇಲ್ಲದಂತಾಗಿರುವುದು ಆತಂಕದ ಸಂಗತಿ.

– ಲೋಕೇಶ ಅಗಸನಕಟ್ಟೆ.

ದಾವಣಗೆರೆ, ಜು.14- ಟಿ. ಗಿರಿಜಾ ಅವರ ಸವಿ ನೆನಪಿಗಾಗಿ ನಗರದ ಯಾವುದಾದರೊಂದು ಮುಖ್ಯ ರಸ್ತೆ ಅಥವಾ ವೃತ್ತಕ್ಕೆ ಹೆಸರು ಸೂಚಿಸಲು ಪಾಲಿಕೆ ಗಮನ ಹರಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.

ವನಿತಾ ಸಾಹಿತ್ಯ ವೇದಿಕೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ `ಟಿ. ಗಿರಿಜಾ ಅವರ 10ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಿರಿಜಾ ಅವರ ಹೆಸರು ಸೂಚಿಸಲು ಪಾಲಿಕೆಗೆ ಮನವಿ ಮಾಡಿದ್ದೇವೆ. ಆದರೆ ಅಲ್ಲಿಂದ ಕೇವಲ ಆಶ್ವಾಸನೆಗಳನ್ನೇ ಕೇಳುತ್ತಿದ್ದೇವೆಯೇ ಹೊರತು ಕಾರ್ಯರೂಪ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು, ಪಾಲಿಕೆ ಮೇಯರ್‌ ಹಾಗೂ ಪಾಲಿಕೆ ಸದಸ್ಯರು ನಿರ್ಧರಿಸಿದರೆ ಈ ಕೆಲಸ ದೊಡ್ಡದಲ್ಲ ಎಂದ ಅವರು, ಬೇಡಿಕೆ ಈಡೇರದಿದ್ದರೆ ಸಾರ್ವಜನಿಕರೊಂದಿಗೆ ಪಾಲಿಕೆಗೆ ಹಕ್ಕೊತ್ತಾಯ ಮಂಡಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸ್ತ್ರೀಯರಿಗೆ ಸರಿಯಾದ ಸ್ಥಾನಮಾನ ದೊರೆಯದೇ ಇದ್ದಲ್ಲಿ ಗಿರಿಜಾ ಅವರು ಹೋರಾಟ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಸ್ತ್ರೀ ಪರ ಸಂಘಟನೆಗಳ ಜತೆಗೆ ಪುರುಷ ಸಂಘಟನೆಗಳು ಸೇರಿದಾಗ ಸಂಘಟನೆಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ಹೇಳಿದರು.

ವಿಮರ್ಶಕ ಡಾ. ಲೋಕೇಶ್‌ ಅಗಸನಕಟ್ಟೆ ಮಾತನಾಡಿ, ಟಿ. ಗಿರಿಜಾ ಅವರ ಸಂಶೋಧನಾ ಕಾರ್ಯ ಎಲ್ಲ ಸಂಶೋಧಕರಿಗೂ ಮಾದರಿ ಎಂದು ಗಿರಿಜಾ ಅವರನ್ನು ಶ್ಲ್ಯಾಘಿಸಿದರು.

ಜಿಲ್ಲೆಯ ಸಮಗ್ರ ಮಾಹಿತಿಯ ಸಂಶೋಧನಾ ಕೃತಿ ಮತ್ತು ಭಾರತದ 2 ಸಾವಿರ ನದಿಗಳ ಬಗ್ಗೆ ಮಾಹಿತಿ ನೀಡಿದ ಟಿ. ಗಿರಿಜಾ ಅವರ ಸಂಶೋಧನೆಗೆ ಸಿಗಬೇಕಿದ್ದ ಗೌರವ ಸಮಾಜದಿಂದ ದೊರಕಲಿಲ್ಲ ಎಂದು ಕೊರಗಿದರು.

ಗಿರಿಜಾ ಅವರ ಪ್ರತಿಭೆಗೆ ಆರ್ಥಿಕ ಶ್ರೀಮಂತಿಕೆ ಕೊರತೆಯಿಹಿದ್ದರಿಂದ ಅವರ ಬೆಳವಣಿಗೆಗೆ ಹಿನ್ನಡೆ ಆಗಿರಬಹುದು. ಆದರೆ ವನಿತಾ ಸಮಾಜ ಅವರ ನೆನಪನ್ನು ಸದಾ ಜೀವಂತಿಕೆಯಾಗಿರುಸುತ್ತಿರುವುದು  ಪ್ರಶಂಸನೀಯ ಎಂದರು.

ಈ ವೇಳೆ ಕೋಮಲ ವಸಂತ ಕುಮಾರ್‌ ಅವರ `ಭಕ್ತಿ ಭಾವ ಲಹರಿ’ ಕವನ ಸಂಕಲನ ಕೃತಿ ಲೋಕಾರ್ಪಣೆ ಮಾಡಲಾಯಿತು. ಮಲ್ಲಮ್ಮ ನಾಗರಾಜ್‌ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಯ ಮತ್ತು ಸಂಗಡಿಗರು ನಾಡಗೀತೆ ಹೇಳಿದರು. ಜಯಮ್ಮ ನೀಲಗುಂದ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯ್ಯಪ್ಪ, ಶಶಿಕಲಾ ಕೃಷ್ಣಮೂರ್ತಿ, ಜ್ಯೋತಿಷಿ ಸಿ.ಕೆ ಆನಂದ ತೀರ್ಥಾಚಾರ್‌ ಮತ್ತು ಇತರರಿದ್ದರು.

error: Content is protected !!