ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ

ಸ್ಲಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್ಸೆಸ್

ದಾವಣಗೆರೆ, ಜು.14- ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ರೋಟರಿ ಬಾಲ ಭವನದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆಯಿಂದ ಭಾನುವಾರ ಆಯೋಜಿಸಿದ್ದ `ಸ್ಲಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಲಂ ವಿದ್ಯಾರ್ಥಿಗಳಲ್ಲಿ ಅನುಕೂಲ ಕಡಿಮೆ ಇರುತ್ತವೆ. ಆದ್ದರಿಂದ ಇಂತಹ ಪುರಸ್ಕಾರಗಳು ಮಕ್ಕಳಲ್ಲಿ ಹೆಚ್ಚಿನ ಓದಿಗೆ ಪ್ರೋತ್ಸಾಹ ನೀಡುತ್ತವೆ ಎಂದು ಹೇಳಿದರು. ಸ್ಲಂ ಜನರನ್ನು ಕಡೆಗಣಿಸದೇ ಪ್ರತಿಭೆಗೆ ಪುರಸ್ಕಾರ ನೀಡುವುದು ಪುಣ್ಯದ ಕೆಲಸವಾಗಿದೆ. 

ಈ ನಿಟ್ಟಿನಲ್ಲಿ ಕಾಳಜಿ ಹೊಂದಿದ ಸ್ಲಂ ಜನಾಂದೋಲನ ಹಾಗೂ ಸಾವಿತ್ರಿ ಬಾಯಿ ಫುಲೆ ಸಂಘಟನೆಯ ಕಾರ್ಯ ಶ್ಲ್ಯಾಘನೀಯ ಎಂದರು.

ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಇಮ್ತಿಯಾಜ್‌ ಆರ್‌. ಮಾನ್ವಿ ಪ್ರಾಸ್ತಾವಿಕ ಮಾತನಾಡಿ, ಸ್ಲಂ ಜನರಲ್ಲಿನ ಕೂಲಿ ಕಾರ್ಮಿಕರ ಮಕ್ಕಳು ಆರ್ಥಿಕ ಸಮಸ್ಯೆಯ ನಡುವೆಯೇ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಪಡೆದಿರುವುದು ಅದ್ಭುತ ಸಾಧನೆ ಎಂದು ಅಭಿನಂದಿಸಿದರು.

ಮಕ್ಕಳು ಓದನ್ನು ಅರ್ಧಕ್ಕೆ ನಿಲ್ಲಿಸದೇ ಶೈಕ್ಷಣಿಕವಾಗಿ ಪ್ರಗತಿ ಹೊಂದುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ಸ್ಲಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕೆಪಿಸಿಸಿ ಸಂಚಾಲಕ ಎಸ್‌.ಎಲ್‌. ಆನಂದಪ್ಪ, ಸ್ಲಂ ಜನಾಂದೋಲನದ ಅಧ್ಯಕ್ಷ ಎಂ. ಶಬ್ಬೀರ್‌ ಸಾಬ್‌, ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷೆ ಮಂಜುಳಾ, ಜಂಷಿದಾ ಬಾನು ಮತ್ತು ಇತರರಿದ್ದರು.

error: Content is protected !!