ಶಿಕ್ಷಣದಿಂದ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ

ಶಿಕ್ಷಣದಿಂದ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ

ದೇವಾಂಗ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಾ.ಈಶ್ವರಾನಂದ ಸ್ವಾಮೀಜಿ 

ದಾವಣಗೆರೆ, ಜು. 14- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಶಿಕ್ಷಣದಿಂದ ಏನೆಲ್ಲಾ ಸಾಧಿಸಬಹುದು ಮತ್ತು ಶಿಕ್ಷಣದಿಂದಲೇ ಸಮಾಜದ ಪ್ರಗತಿ ಸಾಧ್ಯ ಎಂದು ಯಾದಗಿರಿ ಜಿಲ್ಲೆ ಶ್ರೀ ಕ್ಷೇತ್ರ ಮುದೇನೂರು ಮಹಾಸಂಸ್ಥಾನ ಮಠದ ಡಾ. ಈಶ್ವರಾನಂದ ಸ್ವಾಮೀಜಿ ಹೇಳಿದರು.

ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಮುದಾಯ ಭವನದಲ್ಲಿ ದಾವಣಗೆರೆ ನಗರ ದೇವಾಂಗ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಏಳನೇ ವರ್ಷದ ಜಿಲ್ಲಾ ಮಟ್ಟದ ದೇವಾಂಗ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಓದುವ ಛಲ, ನಿರ್ದಿಷ್ಟ ಗುರಿ, ನಿರಂತರ ಅಧ್ಯಯನದಿಂದ ಸಾಧನೆ ಯಶಸ್ವಿಯಾಗಲು ಸಾಧ್ಯವಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ  ಜೀವನದ ಪ್ರಮುಖ ಘಟ್ಟವಾಗಿದ್ದು, ಇವರೆಡರ ನಂತರ ಬದುಕಿನ ಅನೇಕ ದಾರಿಗಳಿದ್ದು, ಯಾವ ಮಾರ್ಗದಲ್ಲಿ ಸಾಗಿದರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂಬುದರ ಬಗ್ಗೆ ಪಾಲಕರು ಮಕ್ಕಳೊಂದಿಗೆ ಚಿಂತನೆ ನಡೆಸಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸುವುದು ಅಗತ್ಯ ಎಂದರು.

ಸರ್ಕಾರ ನೀಡಿರುವ ಸಿಎ ನಿವೇಶನದಲ್ಲಿ ದೇವಾಂಗ ಸಮಾಜದ ಭವ್ಯವಾದ ಸಮುದಾಯ ನಿರ್ಮಾಣ ಮಾಡಬೇಕಾಗಿದ್ದು, ಇಂತಹ ಮಹತ್ಕಾರ್ಯಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಉನ್ನತ ಹುದ್ದೆಯಲ್ಲಿರುವ ಸಮಾಜ ಬಾಂಧವರು ದೇವಾಂಗ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ಮಾಜಿ ಮೇಯರ್, ಹಾಲಿ ಸದಸ್ಯ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ನೆಮ್ಮದಿ ಜೀವನಕ್ಕೆ ಆರೋಗ್ಯ ತುಂಬಾ ಮುಖ್ಯ. ನಿತ್ಯ ಬದುಕಿನಲ್ಲಿ ಒಂದಿಷ್ಟು ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಶುದ್ಧ ಕುಡಿಯುವ ನೀರಿನ ಬಳಕೆಯನ್ನು ಸರಿಯಾಗಿ ಅಳವಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಆರೋಗ್ಯ ಚನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಇಂದಿನ ಒತ್ತಡದ ಜೀವನದಲ್ಲಿ ಆಲಸ್ಯತನ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ನಿಶ್ಚಲವಾದ ಗುರಿ, ಸಾಧಿಸುವ ಛಲ, ಸತತ ಪರಿಶ್ರಮ ಅತ್ಯಗತ್ಯ. ಪೂರ್ವಿಕರ ಕಾಲದಲ್ಲಿ ಮಕ್ಕಳಲಿರಲವ್ವ ಮನೆ ತುಂಬಾ ಎನ್ನುವ ಮಾತಿತ್ತು. ನಂತರ ಅದು ಆರತಿಗೊಬ್ಬ, ಕೀರ್ತಿಗೊಬ್ಬ ಎಂದು ಬದಲಾಯಿತು. ಮುಂದಿನ ದಿನಗಳಲ್ಲಿ ಮನೆಗೊಂದು ಮಗು ಸಾಕು ಎನ್ನುವ ಕಾಲ ಸನ್ನಿಹಿತವಾಗಿದೆ. ಆದರೆ ಇತ್ತೀಚಿನ ಜನರನ್ನು ಕಾಡುತ್ತಿರುವ ಅನಾರೋಗ್ಯ, ಹಳಿ ತಪ್ಪಿದ ಜೀವನ ಶೈಲಿ, ಫಾಸ್ಟ್ ಫುಡ್ ನಿಂದಾಗಿ ಮನುಷ್ಯ ಕೂಡ ಯಾವ ಸಮಯದಲ್ಲಿ ಸಾಯುತ್ತಾನೆ ಎಂದು ಹೇಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯರೂ, ಕಾಂಗ್ರೆಸ್ ಮುಖಂಡರಾದ ಬಿ.ಎಂ. ವಾಗೀಶ್ ಸ್ವಾಮಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಬಲಾಢ್ಯರಾದಾಗ ಮಾತ್ರ ಆರ್ಥಿಕ ಸಬಲತೆ ಕಾಣಬಹುದಾಗಿದೆ ಎಂದರು.

ದೇವಾಂಗ ಸಮಾಜ ಹೊಂದಾಣಿಕೆ ಮತ್ತು ಸೌಜನ್ಯಶೀಲ ಸಮಾಜವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಅನಿವಾರ್ಯವಾಗಿದ್ದು, ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾದ ಹೊಣೆಗಾರಿಕೆ ದೇವಾಂಗ ಸಮಾಜದ ಮೇಲಿದೆ. ಉನ್ನತ ಹುದ್ದೆಯಲ್ಲಿರುವವರು ಸಮಾಜದ ಉನ್ನತಿ ಕಡೆ ಗಮನಹರಿಸುವ ಅವಶ್ಯವಿದೆ ಎಂದು ಹೇಳಿದರು.

ಸಮಾಜ ಸದೃಢವಾಗಿ ಬೆಳೆಯಲು ಸಂಘಟಿತರಾಗಬೇಕಿದೆ. ಸಮಾಜದ ಸಮುದಾಯ ನಿರ್ವಹಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮಿಂದ ಸಹಾಯ, ಸಹಕಾರ ಇದ್ದೇ ಇರುತ್ತದೆ ಎಂದರು.

ಪೋಷಕರು ಮಕ್ಕಳ ಮನಸ್ಥಿತಿ ಅರಿಯಬೇಕು. ಅವರ ಆಸಕ್ತಿಗೆ ಅನುಗುಣವಾದ ವಿದ್ಯಾಭ್ಯಾಸಕ್ಕೆ ನೆರವಾಗಬೇಕಿದೆ.ಮಕ್ಕಳು ಸಂಸ್ಕಾರವಂತರಾಗಿ, ತಂದೆ-ತಾಯಿಗಳಿಗೆ ಚಿರಋಣಿಯಾದಾಗ ಬದುಕಿಗೆ ಸಾರ್ಥಕತೆ ಬರುತ್ತದೆ ಎಂದು ಹಿತನುಡಿದರು.

ಜಿಲ್ಲಾ ದೇವಾಂಗ ಸಂಘದ ಗೌರವಾಧ್ಯಕ್ಷ ಡಾ. ಎಸ್. ರಂಗನಾಥ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಕೇವಲ ಉದ್ಯೋಗವನ್ನೇ ನಂಬಿ ಕಾಲ ಕಳೆಯುವುದಕ್ಕಿಂತ ಸ್ವಯಂ ಉದ್ಯೋಗದತ್ತ ಚಿತ್ತ ಹರಿಬೇಕೆಂದು ಸಲಹೆ ನೀಡಿದರು.

ನಗರ ದೇವಾಂಗ ಸಂಘದ ಅಧ್ಯಕ್ಷ ಬಿ.ಎನ್.ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಎಂ. ಎನ್. ರಾಮಚಂದ್ರಪ್ಪ, ನಗರ ಸಂಘದ ಗೌರವಾಧ್ಯಕ್ಷ ಟಿ. ಅಜ್ಜೇಶಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಬಿ.ಆರ್. ಶೈಲಜಾ ರಮೇಶ್, ದೇವಾಂಗ ಹಾಸ್ಟೇಲ್ ಅಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ, ಉದ್ಯಮಿ ಅತಿಥ್‌ ಅಂಬರಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಸ್.ಜಿ. ಪುನೀತ್ ಶಂಕರ್, ಮುಖಂಡರಾದ ಬಿ.ಜಿ. ಪುಟ್ಟಸ್ವಾಮಿ, ಸಿ.ಹೆಚ್. ಗಿರಿಶ್, ಮುರುಡಪ್ಪ, ನಾಗರಾಜಪ್ಪ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. 

ಇದೇ ವೇಳೆ ದೇವಾಂಗ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

error: Content is protected !!