ಒಳ ಪಂಗಡಗಳ ನಡುವೆ ವಿವಾಹಗಳು ಹೆಚ್ಚಾಗಲಿ

ಒಳ ಪಂಗಡಗಳ ನಡುವೆ ವಿವಾಹಗಳು ಹೆಚ್ಚಾಗಲಿ

ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್ಸೆಸ್ ಆಶಯ

ದಾವಣಗೆರೆ, ಜು.14- ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳೂ ಒಂದಾಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಒಳ ಪಂಗ ಡಗಳ ನಡುವೆ ವಿವಾಹಗಳು ಹೆಚ್ಚಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಹಿರಿಯ ಶಾಸಕರೂ ಆದ ಡಾ.ಶಾಮನೂರು ಶಿವಶಂಕರಪ್ಪ ಆಶಿಸಿದರು.

ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಷನಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಮಹಾಂತಸ್ವಾಮಿ ಪದವಿ ಪೂರ್ವ ಕಾಲೇಜು ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಮಹಾಂತ ಸ್ವಾಮೀಜಿ ಅವರ ಹೆಸರಿನಲ್ಲಿ ಆರಂಭಿಸಲಾಗುತ್ತಿರುವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ಸ್ವಾಮೀಜಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಈ ಕೆಲಸ ಶ್ಲ್ಯಾಘನೀಯ ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಮಾಜದವರೂ ತಮ್ಮ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ನಡೆಸುತ್ತಾರೆ. ಇಲ್ಲರೂ ವಿದ್ಯಾವಂತ ರಾಗಲಿ ಎಂಬುದು ಇದರ ಉದ್ದೇಶ. ಇದು ಒಳ್ಳೆಯ ಬೆಳವಣಿಗೆ ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದಿಂದ ರಾಜ್ಯಾದ್ಯಂತ ಪ್ರತಿಭಾ ಪುರಸ್ಕಾರಕ್ಕಾಗಿ ಪ್ರತಿ ವರ್ಷವೂ 1 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. ಸರ್ಕಾರಿ ಶಾಲಾ-ಕಾಲೇಜುಗಳಿಗಿಂತ ಖಾಸಗಿ ಶಾಲಾ-ಕಾಲೇಜುಗಳೇ ಇಂದು ಹೆಚ್ಚಾಗುತ್ತಿವೆ. ಖಾಸಗಿ ಸಂಸ್ಥೆಗಳಲ್ಲಿ ಫಲಿತಾಂಶವೂ ಉತ್ತಮ ರೀತಿಯಲ್ಲಿ ಬರುತ್ತದೆ. ಸರ್ಕಾರ ಇದಕ್ಕೆ ಕಾರಣವನ್ನು  ಪರಿಶೀಸುತ್ತಲೇ ಇದೆ. ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ ಮಾಡಲಿ. ಈ ಕಾರ್ಯಕ್ಕೆ ಜನತೆಯೂ ಕೈ ಜೋಡಿಸಲಿ ಎಂದು ಹೇಳಿದರು.

ಬಿಸಿ. ಉಮಾಪತಿ ಒಂದಲ್ಲಾ ಒಂದು ಕೆಲಸದಲ್ಲಿ ಶ್ರಮದಿಂದ ಮುಂದಾಳತ್ವ ವಹಿಸುತ್ತಾರೆ. ಈಗ ಕಾಲೇಜು ಆರಂಭಿಸಿದ್ದಾರೆ. ಇದೇ ರೀತಿ ಇನ್ನೂ ಅನೇಕ ಜನಪರ ಕೆಲಸಗಳನ್ನು ಮಾಡಲಿ ಎಂದು ಶಾಸಕ ಎಸ್ಸೆಸ್ ಆಶಿಸಿದರು.

ಮಹಾನಗರ ಪಾಲಿಕೆ 44ನೇ ವಾರ್ಡ್ ಸದಸ್ಯೆ ಹೆಚ್ಆರ್. ಶಿಲ್ಪಾ ಜಯಪ್ರಕಾಶ್ ಮಾತನಾಡುತ್ತಾ, ನಮ್ಮ ವಾರ್ಡ್‌ನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆ ನಮ್ಮ ವಾರ್ಡ್ ಹಿರಿಮೆ ಹೆಚ್ಚಿಸಲಿದೆ ಎಂದರು.

ದಾವಣಗೆರೆ ಜ್ಞಾನ ಕಾಶಿ ಎಂದು ಕರೆಯಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳ ಪಾತ್ರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರಲಿ ಎಂದು ಆಶಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಡಿಡಿಪಿಯು ಕರಿಸಿದ್ದಪ್ಪ ಎಸ್.ಜಿ. ಮಾತನಾಡುತ್ತಾ, ನೂತನ ಸಂಸ್ಥೆಯ ಆರಂಭ ಹೊಸ ಮನ್ವಂತರಕ್ಕೆ ದಾರಿಯಾಗಲಿದೆ. ಬಿ.ಸಿ. ಉಮಾಪತಿಯವರು ಇಲ್ಲಿಯವರೆಗೆ ಜವಳಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಇನ್ನು ಮುಂದೆ ಶೈಕ್ಷಣಿಕ ಕ್ಷೇತ್ರದಲ್ಲೂ ಅವರ ಸಾಧನೆ ಹೆಚ್ಚಾಗಲಿ ಎಂದು ಆಶಿಸುತ್ತಾ, ಸಂಸ್ಥೆಗೆ ಇಲಾಖೆಯಿಂದ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.

ಬಿ.ಸಿ. ಉಮಾಪತಿ ಹಾಗೂ ಎಸ್.ಕೆ. ವೀರಣ್ಣ ಅವರಿಗೆ ಸನ್ಮಾನಿಸಿ ಮಾತನಾಡಿದ ಕುರುಬ ಸಮಾಜದ ಮುಖಂಡ ಪರಶುರಾಮಪ್ಪ, ಇವರಿಬ್ಬರೂ ನಿಜವಾದ ಜಾತ್ಯತೀತರು ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ.ಎಸ್.ಎಂ. ಎಲಿ, ಉದ್ಯಮಿ ಎಸ್.ಕೆ. ವೀರಣ್ಣ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಸಿ. ಅಜ್ಜಯ್ಯ ನಾಡಿಗೇರ್, ರೈಸ್ ಮಿಲ್ ಮಾಲೀಕ ಐ.ಎಸ್. ಪ್ರಸನ್ನ ಕುಮಾರ್ ಆರಾಧ್ಯ, ಶ್ರೀಮಠದ ಆಡಳಿತಾಧಿಕಾರಿ ಡಾ.ಹೆಚ್.ಪಿ. ರಾಜ್ ಕುಮಾರ್ ಅವರುಗಳಿಗೆ ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 120 ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 90 ವಿದ್ಯಾರ್ಥಿಗನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಿತ್ತೂರು ಚನ್ನಮ್ಮ ಮಹಿಳಾ ಘಟಕದವರು ಪ್ರಾರ್ಥಿಸಿದರು. ಅಂದನೂರು ಆನಂದಕುಮಾರ್ ಸ್ವಾಗತಿಸಿದರು. ಕುಬೇರಪ್ಪ, ಕಲಿವೀರಪ್ಪ, ದೇವರಾಜ್ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಅವರು ಕಾಲೇಜು ಉದ್ಘಾಟನಾ ಪೂಜೆ ನೆರೆವೇರಿಸಿ ಶುಭ ಹಾರೈಸಿದರು.

error: Content is protected !!