ಸಮಾಜವಾದಿ ಎಂ.ಪಿ ಪ್ರಕಾಶ್ 84ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಶಾಸಕಿ ಲತಾ
ಹರಪನಹಳ್ಳಿ, ಜು. 11 – `ರಾಜಕಾರಣದಲ್ಲಿ ಮಾದರಿ ವ್ಯಕ್ತಿತ್ವ ಹೊಂದಿದ್ದ ನನ್ನ ತಂದೆಯೇ ನನಗೆ ರಾಜಕೀಯ ಗುರು’ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆ ಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದ ವತಿಯಿಂದ ಇಂದು ಆಯೋಜಿಸಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ 84ನೇ ಜನ್ಮ ದಿನೋತ್ಸವದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿನ ವಿದ್ಯಮಾನಗಳನ್ನು ಗಮನಿಸು ತ್ತಿದ್ದಲ್ಲಿ, ರಾಜಕೀಯ ಮತ್ತು ರಾಜಕಾರಣಿಗಳು ಎಂದರೆ ಒಂದು ರೀತಿಯ ಅಸಹ್ಯ ಮತ್ತು ವಾಕರಿಕೆ ಬರುವಂತಿದೆ ಎಂದರೂ ತಪ್ಪಾಗದು. ಅಂತಹ ಭ್ರಷ್ಟ ರಾಜಕಾರಣದ ಮಧ್ಯದಲ್ಲಿಯೂ ಅಲ್ಲೊಂದು, ಇಲ್ಲೊಂದು ಸರಳ ಸಜ್ಜನ ರಾಜಕಾರಣಿಗಳು ಎಲೆಮರೆಯ ಕಾಯಿಯಂತೆ ಮಿಂಚಿ ಕಣ್ಮರೆಯಾಗಿ ಹೋಗಿದ್ದಾರೆ ಎಂದು ಅವರು ಹೇಳಿದರು.
ಸಾಹಿತಿ, ರಂಗಕರ್ಮಿ ಮತ್ತು ಸಮಾಜವಾದಿ ರಾಜಕಾರಣಿಯಾಗಿ ರಾಜ್ಯದ ಮಂತ್ರಿ, ಉಪಮುಖ್ಯಮಂತ್ರಿಗಳೂ ಆಗಿದ್ದ ಎಂ.ಪಿ. ಪ್ರಕಾಶ್ ಅವರಿಂದ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವ ಗುಣ, ಸರಳ ವ್ಯಕ್ತಿತ್ವ, ಪ್ರಮಾಣಿಕತೆ ಕಲಿತಿರುವೆ. ಅವರಂತೆ ಮಾತನಾಡಲು ಬರಲ್ಲ, ಆದರೆ ಅವರ ತತ್ವಾದರ್ಶಗಳನ್ನು ಪಾಲಿಸುತ್ತಿರುವೆ ಎಂದು ಲತಾ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಎಂ.ಪಿ ಪ್ರಕಾಶ್ ಅವರು ಒಬ್ಬ ಸರಳ ಸಜ್ಜನ ರಾಜಕಾರಣಿಯಾ ಗಿದ್ದರು. ಅವರು ಮೂಲತಃ ವಕೀಲರಾಗಿ ಸೇವೆ ಸಲ್ಲಿಸಿ ನಂತರ 1973ರಲ್ಲಿ ಪದವೀಧರ ಕ್ಷೇತ್ರದಿಂದ ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಯಗೊಳ್ಳುವ ಮೂಲಕವಾಗಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ನಂತರದಲ್ಲಿ 1979ರಲ್ಲಿ ಹಡಗಲಿ ವಿಧಾನ ಸಭಾ ಕ್ಷೇತ್ರದಿಂದ ಕೋಗಳಿ ಕರಿಬಸವನ ಗೌಡರ ವಿರುದ್ದವಾಗಿ ಸ್ಪರ್ಧಿಸಿ ಪುನಃ ಪರಾಭವಗೊಂಡರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮುಂದೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿದರು.
ಅಂದಿನಿಂದ ರಾಜಕೀಯ ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸುತ್ತಾ, ಮತ್ತೊಮ್ಮೆ ಸೋಲನ್ನು ಅನುಭವಿಸುತ್ತಾ ಸೋಲು-ಗೆಲುವನ್ನು ಸಮನಾಗಿ ಹಂಚಿಕೊಂಡಿದ್ದಾರೆ. ಸೋತಾಗ ಎದೆಗುಂದದೆ, ಗೆದ್ದಾಗ ಬೀಗದೆ ಜನರ ಸೇವೆಯನ್ನು ಮಾಡುತ್ತಾ ಉನ್ನತ ಸ್ಥಾನ ಮಾನಕ್ಕೇರಿದವರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ನಾಡಿನ ಪ್ರಗತಿಗಾಗಿ ಶ್ರಮಿಸಿದ್ದಾರೆ. ಅಂತಹ ಸಜ್ಜನ ರಾಜಕಾರಣಿಯಿಂದ ನಮ್ಮಂತವರು ಕಲಿಯುವುದು ಬಹಳ ಇದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ, ಪುರಸಭೆ ಸದಸ್ಯರಾದ ಟಿ.ವೆಂಕಟೇಶ. ಲಾಟಿ ದಾದಾಪೀರ್, ಹಲವಾಗಲು ಗ್ರಾಮ ಪಂಚಾಯಿತಿ
ಮಾಜಿ ಅಧ್ಯಕ್ಷೆ ಎನ್.ಟಿ.ರತ್ನಮ್ಮ
ಸೋಮಪ್ಪ, ಮುಖಂಡರಾದ ಆಲದಹಳ್ಳಿ ಷಣ್ಮುಖಪ್ಪ, ಗುಂಡಗತ್ತಿ ಕೊಟ್ರಪ್ಪ, ಎಚ್.ವಸಂತಪ್ಪ. ಮೈದೂರು ರಾಮಣ್ಣ, ಬಾಣದ ಅಂಜಿನಪ್ಪ, ಹರಿಯಮ್ಮನಹಳ್ಳಿ ಶಿವರಾಜ, ಇಸ್ಮಾಯಿಲ್ ಎಲಿಗಾರ್, ಎಚ್.ಎಂ.ಕೊಟ್ರಯ್ಯ, ತೆಲಗಿ ಉಮಾಕಾಂತ, ಇಟ್ಟಿಗುಡಿ ಅಂಜಿನಪ್ಪ, ಎ.ಜಾವೀದ್, ಸಿ.ಜಾಹೀದ್, ಹುಲಿಕಟ್ಟಿ ಚಂದ್ರಪ್ಪ, ಶಂಕರ್, ಸಿದ್ದಲಿಂಗಸ್ವಾಮಿ ಎಚ್.ಎಂ.ಮಲ್ಲಿಕಾರ್ಜುನ್, ಎಂ.ಪಿ.ಗೌತಮ್ ಪ್ರಭು, ಉದಯಶಂಕರ ಸೇರಿದಂತೆ, ಇತರರು ಇದ್ದರು.