ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ಮಲೇಬೆನ್ನೂರು ಜು. 5- ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಭದ್ರಾ ಹಾಗೂ ಗಾಜನೂರಿನ ತುಂಗಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದೆ. ತುಂಗಾ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ಸ್‌ ಗೂ ಅಧಿಕ ನೀರು ಹರಿದು ಬರುತ್ತಿದ್ದು ಅಷ್ಟೂ ನೀರನ್ನು ನದಿಗೆ ಬಿಡಲಾಗುತ್ತಿದ್ದು ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.

ಉಕ್ಕಡಗಾತ್ರಿಯ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾದ ಸ್ನಾನ ಘಟ್ಟ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು ನದಿ ಅಪಾಯ ಮಟ್ಟ ತಲುಪುತ್ತಿದೆ. ಭಕ್ತರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ. ರಾತ್ರಿ ವೇಳೆಗೆ ಫತ್ತೇಪುರ – ಉಕ್ಕಡಗಾತ್ರಿ ಸಂಪರ್ಕ ಸೇತುವೆ ನದಿ ಹಿನ್ನೀರಿನಲ್ಲಿ ಮುಳುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಉಪ ತಹಶೀಲ್ದಾರ್ ಆರ್ ರವಿ ಮನವಿ ಮಾಡಿದ್ದಾರೆ.

ಭದ್ರಾ ಒಳ ಹರಿವು ಹೆಚ್ಚಳ: ಭದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಕ್ಕೆ ಬರುವ ನೀರಿನ ಒಳ ಹರಿವೂ ಸಹ ಗಣನೀಯವಾಗಿ  ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ 16171 ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ ವೇಳೆಗೆ ಸುಮಾರು 00 ಸಾವಿರ ಕ್ಯೂಸೆಕ್ಸ್ ದಾಟಿದೆ. ಜಲಾಶಯದ ನೀರಿನ ಮಟ್ಟ 131 ಅಡಿ ತಲುಪಿದೆ ಎನ್ನಲಾಗಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಳ ಅಚ್ಚುಕಟ್ಟಿನ ರೈತರಿಗೆ ಸಂತಸ ತಂದಿದೆ.

error: Content is protected !!