ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ
ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲೂಯೀಸ್ ಗೇಟ್ ದುರಸ್ತಿ ಕಾರ್ಯದಲ್ಲಿ ಸಿಬ್ಬಂದಿ
ಶಿವಮೊಗ್ಗ, ಜು. 7 -ಭದ್ರಾ ಜಲಾಶಯದ ತಳಮಟ್ಟದ ಗೇಟ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಸರಿಪಡಿಸುವ ಕೆಲಸ ಭಾನುವಾರ ಬೆಳಿಗ್ಗೆ ಪೂರ್ಣಗೊಂಡಿದ್ದು, ಜಲಾಶಯದಿಂದ ಹೊರ ಹೋಗುತ್ತಿದ್ದ ನೀರನ್ನು ಬಂದ್ ಮಾಡಲಾಗಿದೆ ಎಂದು ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ತಿಳಿಸಿದ್ದಾರೆ.
ಈ ಕುರಿತು ಅವರು ಭಾನುವಾರ ಸಂಜೆ ಪತ್ರಿಕಾ ಹೇಳಿಕೆ ನೀಡಿದ್ದು, ಜಲಾಶಯದ ಪವರ್ ಹೌಸ್ ಪಕ್ಕದಲ್ಲಿ ಇರುವ ಸ್ಲೂಯೀಸ್‌ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸುಮಾರು 5 ಇಂಚಿನಷ್ಟು ಗೇಟ್ ತೆರೆದುಕೊಂಡಿತ್ತು. ಇದರಿಂದ ಕಳೆದ 3-4 ದಿನಗಳಿಂದ ನಿತ್ಯ ಸುಮಾರು 1500 ಕ್ಯೂಸೆಕ್ಸ್ ನೀರು ನದಿಗೆ ಹರಿದು ಹೋಗುತ್ತಿತ್ತು. ತಕ್ಷಣ ಗಮನ ಹರಿಸಿ ಇಂಜಿನಿಯರ್‌ಗಳು ಜಲಾ ಶಯಗಳ ತಜ್ಞರ ತಂಡ ಹಾಗೂ ಗುತ್ತಿಗೆದಾರರು ಶ್ರಮ ವಹಿಸಿ ಸತತ ಕಾರ್ಯಾಚರಣೆ ಮೂಲಕ ನೀರು ಹೋಗುತ್ತಿರುವುದನ್ನು ಬಂದ್ ಮಾಡಿ ದ್ದೇವೆ. ನದಿಗೆ ನೀರು ಹರಿಸಬೇಕಾದ ಸ್ವಪ್ಲ ನೀರನ್ನು ಮಾತ್ರ ಬಿಡಲಾಗಿದೆ. ಹಾಗಾಗಿ ಅಚ್ಚಕಟ್ಟಿನ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ ಮತ್ತು ಜಲಾಶಯಕ್ಕೆ ಬಂದು ಪ್ರತಿಭಟನೆ ನಡೆಸದಿರುವಂತೆ ಭದ್ರಾ ಎಸ್.ಇ.ಸುಜಾತ ಅವರು ಮನವಿ ಮಾಡಿದ್ದಾರೆ.
ಭೇಟಿ : ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ. ಅಂಶುಕುಮಾರ್ ಅವರು ಭಾನುವಾರ ಬೆಳಿಗ್ಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಿಸಿದರು.
ಮನವಿ : ಭದ್ರಾ ಜಲಾಶಯದಿಂದ ಸ್ಲೂಯಿಸ್ ಗೇಟ್ ಮೂಲಕ ಪೋಲಾಗುತ್ತಿದ್ದ ನೀರನ್ನು ತಡೆಗಟ್ಟುವ ಕೆಲಸ ಯಶಸ್ವಿಯಾಗಿದ್ದು, ಈ ವಿಚಾರದಲ್ಲಿ ಅಚ್ಚುಕಟ್ಟಿನ ರೈತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಈ ಬಾರಿ ಮುಂಗಾರು ಮಳೆ ಭರವಸೆ ಮೂಡಿಸಿದ್ದು, ಭದ್ರಾ ಜಲಾಶಯ ಭರ್ತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ರೈತರು ಆಶಾದಾಯಕವಾಗಿ ಇರುವಂತೆ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.