ಹಳಕಟ್ಟಿ ಜನ್ಮ ದಿನಾಚರಣೆ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ
ದಾವಣಗೆರೆ, ಜು. 2- ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನತೆಗೆ ಪರಿಚಯಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆಯನ್ನು ಡಾ. ಫ.ಗು. ಹಳಕಟ್ಟಿಯವರು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮ ದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನ್ನೆರಡನೇ ಶತಮಾನದ ವಚನ ಸಾಹಿತ್ಯ ನಮಗೆ ಇಷ್ಟೊಂದು ಸುಲಭವಾಗಿ ಸಿಗುತ್ತಿವೆ ಅಂದರೆ, ಅದಕ್ಕೆ ಮೂಲ ಕಾರಣ ಡಾ. ಹಳಕಟ್ಟಿಯವರು. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ಅಮೂಲ್ಯ ತಾಳೆಗರಿಗಳನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ಗ್ರಂಥ ರೂಪದಲ್ಲಿ ಎಲ್ಲರೂ ಓದಲು ಅನುಕೂಲ ವಾಗುವಂತೆ ಮುದ್ರಿಸಿದ ಫ.ಗು.ಹಳಕಟ್ಟಿಯವರ ಕಾರ್ಯದಿಂದಾಗಿ ಇಂದು ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ ಎಂದರು.
ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಜೀವನ ಸಂದೇಶಗಳು ವಿಶ್ವಶಾಂತಿ, ವಿಶ್ವಪ್ರೇಮ ಮೂಡಿಸುತ್ತವೆ. ಶರಣರು ತಮ್ಮ ಜೀವನದ ಅನು ಭವಗಳನ್ನು, ವೇದ-ಉಪನಿಷತ್ತುಗಳನ್ನು ಜನ ಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ ರಚಿಸುತ್ತಿದ್ದರು. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ತಿಳಿದ ಹಳಕಟ್ಟಿಯವರು, ಸಾಕಷ್ಟು ಸಂಶೋಧನೆ ನಡೆಸಿ, ವಚನಗಳನ್ನು ಸಂರಕ್ಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಅವರು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿ, ಬಾಲ್ಯ ದಿಂದಲೂ ತಂದೆಯ ಸಾಹಿತ್ಯ ವಲಯದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಬೆಳೆದವರು ಹಳಕಟ್ಟಿಯವರು. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಧೃತಿಗೆಡದೆ ಅವರು ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಅವುಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸೈಕಲ್‍ನ ಸಹಾಯದಿಂದ ಹಲವಾರು ಕಡೆ ಸುತ್ತಾಡಿ ಸಂಗ್ರಹಿತ ತಾಳೆಗರಿಗಳನ್ನು, ಹಸ್ತಪ್ರತಿಗಳನ್ನು ಕೊಳ್ಳುವ ಮೂಲಕ ಸಂರಕ್ಷಿಸಿದರು. 1923 ರಲ್ಲಿ ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ಇವರ ವಚನ ಸಾಹಿತ್ಯ ಸಂಪುಟ-1 ಪ್ರಕಟವಾಯಿತು. 1925 ರಲ್ಲಿ ತಮ್ಮ ಸ್ವ- ಗೃಹದಲ್ಲಿಯೇ ಹಿತಸಾಹಿತ್ಯ ಮುದ್ರಣಾ ಲಯ ಸ್ಥಾಪಿಸಿ, ಸುಮಾರು 175 ಕೃತಿಗಳು ಹಾಗೂ ಹರಿಹರ ಕವಿಯ 42 ರಗಳೆಗಳನ್ನು ಮುದ್ರಣ ಮಾಡಿ ಪ್ರಸಾರ ಮಾಡಿದರು. ಇದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಇವರಿಗೆ 1956 ರಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು ಎಂದು ವಿವರಿಸಿದರು.
ಇದೇ ವೇಳೆ ವಚನ ಸಾಧಕರಾದ ಶಿವಾನಂದ ಗುರೂಜಿ ಕುಂಬಳೂರು, ಚಿಕ್ಕೋಳ್ ಈಶ್ವರಪ್ಪ ಹಿರೇಕೊಗಲೂರು ಮತ್ತು ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ನಿಕಟ ಪೂರ್ವ ಸಹ ಕಾರ್ಯದರ್ಶಿ ಎಂ.ಕೆ ಬಕ್ಕಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂತೋಷ ಉಪಸ್ಥಿತರಿದ್ದರು.