ದಾವಣಗೆರೆ, ಜೂ. 30- ಮಾಜಿ ಸಚಿವೆ, ವನಿತಾ ಸಮಾಜದ ಸಂಸ್ಥಾಪಕರಾಗಿದ್ದ ದಿ. ಡಾ.ನಾಗಮ್ಮ ಕೇಶವಮೂರ್ತಿ ಅವರ ಜೀವನ ಸಾಧನೆ ಕುರಿತ ಸಂಶೋಧನಾ ಗ್ರಂಥ ಹೊರ ತರುವ ಅಗತ್ಯವಿದೆ ಎಂದು ನಗರದ ಸಾಧನಾಶ್ರಮದ ಮಾತಾಜಿ ಯೋಗಾನಂದಮಯಿ ಹೇಳಿದರು.
ನಗರದ ವನಿತಾ ಸಮಾಜದಲ್ಲಿನ ಶ್ರೀ ಸತ್ಯಸಾಯಿ ರಂಗಮಂದಿರದಲ್ಲಿ ವನಿತಾ ಸಮಾಜ ಹಾಗೂ ಈಶ್ವರಮ್ಮ ಟ್ರಸ್ಟ್ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ `ನಾಗಮ್ಮ ಆಂಟಿ- 90- ಒಂದು ನೆನಪು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಗಮ್ಮ ಅವರನ್ನು ಹತ್ತಿರದಿಂದ ನೋಡಿದವರು, ಅವರ ಜೀವನ ಸಾಧನೆಗಳನ್ನು ಸಂಪೂರ್ಣವಾಗಿ ಅರಿತಿರುವ ಅವರ ನಿಕಟವರ್ತಿ ಬಿ.ಎನ್. ಮಲ್ಲೇಶ್ ಅವರೇ ಪಿಹೆಚ್‌ಡಿ ಮಾಡಿದರೆ ಸೂಕ್ತ ಎಂದ ಅವರು, ನಾಗಮ್ಮ ಅವರ ಕುರಿತ ಸಂಶೋಧನಾ ಗ್ರಂಥ, ಸಂಸ್ಮರಣ ಗ್ರಂಥಗಳು ರಚನೆಯಾಗಿ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವಂತಾಗಲಿ ಎಂದರು.
ನಾಗಮ್ಮ ಅವರದು ಮೇರು ವ್ಯಕ್ತಿತ್ವ. ಕೀರ್ತಿ ಶರೀರ. ಸಾವಿರಾರು ಹಿರಿಯ ವನಿತೆಯರ ಪ್ರೀತಿಯ ಆಂಟಿ ಎನಿಸಿಕೊಂಡಿದ್ದರು. ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ಮಾನವ ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಿಗೂ ಸ್ಪರ್ಶ ನೀಡಿ, ಅದರ ಸಾಧಕ ಬಾಧಕಗಳನ್ನು ಅರಿತುಕೊಂಡವ ರಾಗಿದ್ದವರು. ಚಿರಂತನ, ಸ್ಫೂರ್ತಿ, ವನಿತಾ ಸಮಾಜ ಬಿಟ್ಟು ಹೋಗಲು ಸಾಧ್ಯವಿಲ್ಲ. ಎಲ್ಲರಲ್ಲೂ ಅವರನ್ನು ಕಾಣಬಹುದು. ಅವರವರ ಸಾಮರ್ಥ್ಯ, ಸ್ವಭಾವಕ್ಕೆ ತಕ್ಕಂತೆ ನಡೆಸಿಕೊಂಡಿದ್ದರು. ಎಲ್ಲಾ ಮಹಿಳೆಯರ ಏಳಿಗೆಯನ್ನು ಬಯಸಿದ ಅಪರೂಪದ ವ್ಯಕ್ತಿತ್ವ ನಾಗಮ್ಮನವರದ್ದಾಗಿತ್ತು ಎಂದು ಹೇಳಿದರು.
ನಾಗಮ್ಮ ಕೇಶವಮೂರ್ತಿ ಅವರ ಸಂಪರ್ಕಕ್ಕೆ ಬಂದವರಾರೂ ಕೂಡ ದೂರ ಉಳಿದಿಲ್ಲ. ಸಮಾಜಕ್ಕೆ ಏನಾದರೂ ಕೊಡುಗೆಯಾಗಿ ನೀಡಬೇಕೆಂಬ ತುಡಿತ ಹೆಚ್ಚಾಗುತ್ತಿತ್ತು. ಅವರ ನೆನಪನ್ನು ಹಚ್ಚ ಹಸಿರಾಗಿ ಇಟ್ಟುಕೊಳ್ಳುವಂತಾಗಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಮಹಿಳಾ ಸೈನ್ಯ ಸಂಪಾದನೆ ಮಾಡಿದ ನಾಗಮ್ಮ ಅವರದು ಸಾರ್ಥಕ ಬದುಕು, ತುಂಬು ಜೀವನ. ಮಹಿಳಾ ಶಕ್ತಿಯಾಗಿದ್ದರು. ಗುಣಗ್ರಾಹಿ ಸ್ವಭಾವದವರು ಎಂದು ಗುಣಗಾನ ಮಾಡಿದರು.
ರಾಜಕಾರಣ, ಸಾಮಾಜಿಕ, ಅಧ್ಯಾತ್ಮ, ಶಿಕ್ಷಣ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ನಾಗಮ್ಮ ಅವರದು ಮೌಲ್ಯಾಧರಿತ ರಾಜಕಾರಣ, ಮಹಿಳಾ ಪಕ್ಷಪಾತಿ. ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶೇ. 50 ರಷ್ಟು ಮಹಿಳಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಮಹಿಳಾ ಮೀಸಲಾತಿಗೆ ಒತ್ತು ಕೊಟ್ಟಿದ್ದರು ಎಂದು ಹೇಳಿದರು.
ವನಿತಾ ಸಮಾಜವೇ ಒಂದು ಜೇನುಗೂಡು ಇದ್ದಂತೆ. ನಾಗಮ್ಮ ಅವರು ರಾಣಿ ಜೇನು ಇದ್ದಂತೆ. ಮೂವತ್ತಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ತೆರೆದು ಅವುಗಳಿಗೆ ಸೂಕ್ತ ವ್ಯಕ್ತಿಗಳನ್ನೇ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದರು ಎಂದರು.
ಶೈಕ್ಷಣಿಕ ಸಲಹೆಗಾರ ಮತ್ತು ತರಬೇತುದಾರ ಜಗನ್ನಾಥ ನಾಡಿಗೇರ್ ಮಾತನಾಡಿ, ನಾಗಮ್ಮ ಅವರಿಗೆ ಮಾನವೀಯ ಸ್ಪರ್ಶ ಪ್ರತಿ ಹಂತದಲ್ಲೂ ಇತ್ತು. ಅವರ ಲ್ಲಿದ್ದ ಅಚ್ಚುಕಟ್ಟುತನ, ಸಂತಸದ ಜೀವನ. ಜೀವನದ ಮುನ್ನೋಟ ಬಹು ದೊಡ್ಡದಾಗಿತ್ತು ಎಂದು ಹೇಳಿದರು.
ನಾಗಮ್ಮ ಅವರದು ಬರೀ ನೆನಪಲ್ಲ ಅದೊಂದು ಕೃತಜ್ಞತೆ. ಅವರು ಮಾಡಿದ ಕೆಲಸ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಅವರು ನಮ್ಮ ಜೊತೆಯಲ್ಲಿ ಅವರ ಕೆಲಸದ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಸಂಗೀತಾ ರಾಘವೇಂದ್ರ, ವಿದ್ಯಾ ಹೆಗಡೆ ಮತ್ತು ಸಂಗಡಿಗರು ಭಜನೆ ನೆರವೇರಿಸಿಕೊಟ್ಟರು. ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷೆ ಉಷಾ ರಂಗನಾಥ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಷ್ಮಾ ಮೋಹನ್ ಮಾತಾಜಿಯವರನ್ನು ಪರಿಚಯಿಸಿದರು. ಡಾ. ಅನುರಾಧ ಬಕ್ಕಪ್ಪ ನಿರೂಪಿಸಿದರು. ನಳಿನಿ ಅಚ್ಯುತ್ ವಂದಿಸಿದರು.