ಆವರಗೆರೆ, ಭಾರತ್ ಕಾಲೋನಿ, ಬಸಾಪುರ ಗ್ರಾಮದ ರಾಜಕಾಲುವೆ ಹೂಳು ತೆಗೆಯಲು ಮೇಯರ್‌ ನಿರ್ದೇಶನ

ಆವರಗೆರೆ, ಭಾರತ್ ಕಾಲೋನಿ, ಬಸಾಪುರ ಗ್ರಾಮದ ರಾಜಕಾಲುವೆ ಹೂಳು ತೆಗೆಯಲು ಮೇಯರ್‌ ನಿರ್ದೇಶನ

ದಾವಣಗೆರೆ, ಜೂ.28- ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಆವರಗೆರೆ, ಭಾರತ್ ಕಾಲೋನಿ, ಬಸಾಪುರ ಗ್ರಾಮದಲ್ಲಿನ ರಾಜಕಾಲುವೆಗಳಿಗೆ ಆಯುಕ್ತರು, ಮೇಯರ್, ಪಾಲಿಕೆಯ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದಷ್ಟು ಬೇಗ ಉಳಿದಿರುವ ಹೂಳೆತ್ತುವ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. 

ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮೇಯರ್ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ್, ಆಡಳಿತ ಪಕ್ಷದ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಶಿವಲಿಂಗ ಕೊಟ್ರಯ್ಯ, ಎಇ ಮನೋಹರ್, ಪ್ರೀತಂ ಸೇರಿದಂತೆ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲಿಸಿತು. 

ಎರಡೂವರೆ ಕಿಲೋಮೀಟರ್‌ವರೆಗೆ ಹೂಳೆತ್ತುವ ಕಾರ್ಯ ನಡೆದಿದ್ದು, ಉಳಿದಿರುವ ಒಂದೂವರೆ ಕಿಲೋಮೀಟರ್ ವರೆಗಿನ ಹೂಳು ಆದಷ್ಟು ಬೇಗ ತೆರವುಗೊಳಿಸಿ. ಮಳೆಗಾಲ ಶುರುವಾಗಿರುವುದರಿಂದ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಹೂಳೆತ್ತುವ ಕಾರ್ಯ ಆದಷ್ಟು ಬೇಗ ಮುಗಿಸಿ, ನೀರು ಸರಾಗವಾಗಿ ಹೋಗುವಂತೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಯಿತು. ಅಲ್ಲದೇ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನೆಯೊಳಗೆ ನೀರು ನುಗ್ಗುವುದು, ಚರಂಡಿಯಲ್ಲಿ ನೀರು ಹೆಚ್ಚಾಗುವುದು, ರಸ್ತೆ ಮೇಲೆ ನೀರು ಹರಿಯುವುದಕ್ಕೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. 

ಈ ವೇಳೆ ಮಾತನಾಡಿದ ಮೇಯರ್ ವಿನಾಯಕ ಪೈಲ್ವಾನ್ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು, ರಾಜಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕಾಲುವೆಯಲ್ಲಿನ ಹೂಳೆತ್ತುವ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಅದೇ ರೀತಿಯಲ್ಲಿ ಉಳಿದ ಕೆಲಸ ಮುಗಿಸಿ, ಜನರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಯಿತು ಎಂದು ಮಾಹಿತಿ ನೀಡಿದರು. 

ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರ ಕೊಡುಗೆ ಅಪಾರ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಆದರೆ, ವಿಪಕ್ಷ ಸದಸ್ಯರು ವಿನಾಕಾರಣ ಆರೋಪ ಮಾಡುತ್ತಾರೆ. ಮೊದಲಿನಿಂದಲೂ ಮಲ್ಲಿಕಾರ್ಜುನ್ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿದ್ದಾಗ ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಆಗಲಿಲ್ಲ ? ಬೆಂಗಳೂರಿನಿಂದ ಇಲ್ಲಿಗೆ ಬಂದು ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡಿದರು ? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಚಿವರು, ಶಾಸಕರೂ ಆಗಿರುವ ಕಾರಣ ಮಲ್ಲಿಕಾರ್ಜುನ್ ಅವರ ಸಲಹೆ, ಮಾರ್ಗದರ್ಶನ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. 

ಜಲಸಿರಿ ಯೋಜನೆಯಡಿ ಬಿಲ್ ನೀಡಿಕೆ ವಿಚಾರ ಸಂಬಂಧ ಸಚಿವರ ಜೊತೆ ಸಮಾಲೋಚನೆ ನಡೆಸುತ್ತೇವೆ. ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಚಿವರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. 2021ರಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ಬಿಜೆಪಿ ಆಡಳಿತವಿದ್ದ ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಆಗಲೇ ನಾವು ವಿರೋಧ ಮಾಡಿದ್ದೇವೆ. ಇದಕ್ಕೆ ಕ್ಯಾರೇ ಎನ್ನಲಿಲ್ಲ. ಆದರೆ, ಈಗ ಮುದ್ರಾಂಕ ಶುಲ್ಕ, ಸಬ್ ರಿಜಿಸ್ಟ್ರಾರ್ ಶುಲ್ಕವೂ ಸೇರಿದಂತೆ ಎಲ್ಲಾ ದರಗಳು ಹೆಚ್ಚಳವಾಗಿವೆ. ಕೇವಲ ದಾವಣಗೆರೆ ಮಹಾನಗರ ಪಾಲಿಕೆ ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಹೆಚ್ಚಳವಾಗಿದೆ. ಇದು ವಿಪಕ್ಷದವರಿಗೆ ಗೊತ್ತಿಲ್ಲವೇ ? ಎಂದು ಗಡಿಗುಡಾಳ್ ಮಂಜುನಾಥ್, ವಿನಾಯಕ್ ಪೈಲ್ವಾನ್ ಪ್ರಶ್ನಿಸಿದರು. 

ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ಚುನಾವಣಾ ಫಲಿತಾಂಶ ಬಂದ ಬಳಿಕ ಏನಾಗಿದೆ ? ಏನಾಗುತ್ತಿದೆ ಎಂಬುದು ಜಿಲ್ಲೆಯ ಜನತೆ ನೋಡುತ್ತಿದ್ದಾರೆ. ನಿತ್ಯವೂ ಕಚ್ಚಾಡುತ್ತಾ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿರುವುದು ನಮಗೂ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸದೃಢ ಆಡಳಿತ ನೀಡಲಾಗುತ್ತಿದೆ. ಪಾಲಿಕೆಯಲ್ಲಿ ಉತ್ತಮ ಕೆಲಸಗಳಾಗುತ್ತಿದ್ದು, ಇದು ಸಹಿಸಲು ಆಗದೇ ವಿಪಕ್ಷ ಸದಸ್ಯರು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

error: Content is protected !!