ಶೇ.85ರಷ್ಟು ಪ್ರಕರಣದಲ್ಲಿ ಶಿಕ್ಷೆಯಾಗುತ್ತಿಲ್ಲ: ಪರಿಶಿಷ್ಟರ ಕುಂದು ಕೊರತೆ ಸಭೆಯಲ್ಲಿ ಎಸ್ಪಿ
ದಾವಣಗೆರೆ ಜೂ. 28 – ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿ ಬೀಳುವ ಕಾರಣದಿಂದ ಶೇ.80-85ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆಯಲಾಗಿದ್ದ ಎಸ್ಸಿ – ಎಸ್ಟಿ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಕ್ಷಿಗಳು ನ್ಯಾಯಾಲಯದಲ್ಲಿ ವಿಚಾ ರಣೆ ಪೂರ್ಣಗೊಳ್ಳುವವರೆಗೂ ಸ್ಥಿರವಾಗಿದ್ದರೆ ಮಾತ್ರ ಶಿಕ್ಷೆ ಕೊಡಿಸಲು ಸಾಧ್ಯ ಎಂದರು.
ಯಾವುದೇ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾದಾಗ ಆ ಬಗ್ಗೆ ನ್ಯಾಯಾಲಯದ ಉಸ್ತುವಾರಿ ಸಮಿತಿಯಿಂದ ಪರಿಶೀಲನೆ ನಡೆಯುತ್ತದೆ. ಖುಲಾಸೆಗೆ ಕಾರಣವೇನು ಎಂಬುದನ್ನು ಪರಿಗಣಿಸಲಾಗುತ್ತದೆ. ಸಾಕ್ಷಿಗಳು ತಿರುಗಿ ಬೀಳುವುದೇ ಖುಲಾಸೆಗೆ ಪ್ರಮುಖ ಕಾರಣ ಎಂಬುದು ಕಂಡು ಬಂದಿದೆ ಎಂದವರು ಹೇಳಿದರು.
ಪರಿಶಿಷ್ಟರ ಮೇಲಿನ ಜಾತಿ ನಿಂದನೆ ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಿಸಿದರೂ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ ಎಂದು ಹೊನ್ನಾಳಿಯ ಜಿ.ಎಸ್. ತಮ್ಮಣ್ಣ ಅವರು ಸಭೆಯಲ್ಲಿ ಹೇಳಿದಾಗ ಎಸ್ಪಿ ಉಮಾ ಪ್ರಶಾಂತ್ ಈ ಪ್ರತಿಕ್ರಿಯೆ ನೀಡಿದರು.
ಸಾಕ್ಷಿಗಳು ನ್ಯಾಯಾಲಯದ ಪ್ರಕರಣ ಪೂರ್ಣಗೊಳ್ಳುವವರೆಗೆ ತಮ್ಮ ಹೇಳಿಕೆಗೆ ಬದ್ಧವಾಗಿರಬೇಕು. ಈ ಬಗ್ಗೆ ದೂರುದಾರರಿಗೆ ಅರಿವು ಮೂಡಿಸುವಲ್ಲಿ ಸಂಘ – ಸಂಸ್ಥೆಗಳೂ ಕೈ ಜೋಡಿಸಬೇಕು ಎಂದು ಎಸ್ಪಿ ಕರೆ ನೀಡಿದರು.
ದಲಿತರ ಪರ ಹೋರಾಟ ನಡೆಸುವ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧವೂ ದೂರು ದಾಖಲಿಸುವ ಘಟನೆಗಳು ನಡೆಯು ತ್ತಿವೆ. ಇದರಿಂದ ದಲಿತ ಪರ ಹೋರಾಟ ನಡೆಸು ವವರು ಸಮಸ್ಯೆ ಎದುರಿಸುವಂತಾಗಿದೆ ಎಂದು ದಲಿತ ಮುಖಂಡ ರಂಗನಾಥ್ ಹೇಳಿದರು.
ದೂರು ದಾಖಲಿಸದಿದ್ದರೆ ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡಿ
ನೊಂದವರು ದೂರು ಕೊಡಲು ಹೋದಾಗ ಪೊಲೀಸರು ಎಫ್ಐಆರ್ ದಾಖಲಿಸದಿದ್ದರೆ, ಠಾಣೆಯಲ್ಲಿರುವ ಕ್ಯೂಆರ್ ಕೋಡ್ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿ ಮೇಸೇಜ್ ಹಾಕಿ, ಇಲ್ಲವೇ ನಮಗೆ ಕರೆ ಮಾಡಿ. ಈ ಬಗ್ಗೆ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಸುಧಾ ಅವರು ಮಾತನಾಡಿ, ನನ್ನ ಮಗಳಿಗೆ ಆದ ತೊಂದರೆ ಬಗ್ಗೆ ಬಿಳಚೋಡು ಠಾಣೆಯಲ್ಲಿ ದೂರು ಕೊಡಲು ಹೋದಾಗ ಬೆಳಿಗ್ಗೆಯಿಂದ ಸಂಜೆವರೆಗೂ ಕೂರಿಸಿ, ಕೇಸ್ ತೆಗೆದುಕೊಳ್ಳದೇ ವಾಪಸ್ ಕಳಿಸಿದ್ದರು ಎಂದರು.
ಆಗ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಪೊಲೀಸರು ಸಾರ್ವಜನಿಕರ ದೂರು ಸ್ವೀಕರಿಸದಿರುವ ಬಗ್ಗೆ ತಿಳಿಸಿದರೆ, ಠಾಣೆಗಳಲ್ಲಿರುವ ಸಿಸಿ ಕ್ಯಾಮೆರಾ ಮೂಲಕ ಪರಿಶೀಲಿಸಿ, ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದರು. ಇಲಾಖೆಯಿಂದಲೂ ಪೊಲೀಸರನ್ನೇ ಮಾರುವೇಷದಲ್ಲಿ ಠಾಣೆಗಳಿಗೆ ಕಳುಹಿಸಿ ದೂರು ಕೊಡಿಸುವ ಮೂಲಕ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ನಮ್ಮ ಇಲಾಖೆಯಿಂದಲೇ ಹೋದವರ ಬಳಿ ದೂರು ದಾಖಲಿಸಿಕೊಳ್ಳದ ಹಾಗೂ ಸರಿಯಾಗಿ ವರ್ತಿಸದ ಮೂವರು ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದರು.
ಬಾಬು ಜಗಜೀವನರಾಂ ಭವನದಲ್ಲಿ ಕೌಶಲ್ಯಾಭಿವೃದ್ಧಿ
ನಗರದ ಬಾಬು ಜಗಜೀವನರಾಂ ಭವನ ಪಾಳು ಬಿದ್ದಿದೆ. ಇದು ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ ಎಂದು ದಲಿತ ಮುಖಂಡ ಲಿಂಗರಾಜ್ ದೂರಿದರು.
ಈ ಭವನವನ್ನು ನಗರ ಪಾಲಿಕೆಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನೌಕರರ ಕೌಶಲ್ಯಾಭಿವೃದ್ಧಿಗೆ ಬಳಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡ ಬೆನ್ನಲ್ಲೇ ಬಿಡುಗಡೆ ಮಾಡುತ್ತಿದ್ದಾರೆ ಎಂದು ಚನ್ನಗಿರಿಯ ಚಿರಂಜೀವಿ ಆಕ್ಷೇಪಿಸಿದರು.
ಈ ಬಗ್ಗೆ ಉತ್ತರಿಸಿದ ಎಸ್ಪಿ ಉಮಾ ಪ್ರಶಾಂತ್, ನ್ಯಾಯಾಲಯದ ಆದೇಶದ ಅನ್ವ ಯ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕ ರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಲ್ಲ ಎಂದರು.
ನಗರದ 45ನೇ ವಾರ್ಡ್ನಲ್ಲಿರುವ ಕರೂರು ಸರ್ಕಾರಿ ಶಾಲೆಗೆ ಜಮೀನು ದಾನ ಮಾಡಲಾಗಿದೆ. ಆದರೂ, ಈ ಶಾಲೆಯ ಜಮೀನು ತಮ್ಮದೇ ಎಂದು ಹೇಳಿಕೊಂಡು ಕೆಲವರು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದಲಿತ ಮುಖಂಡ ಲಿಂಗರಾಜ್ ದೂರಿದರು.
ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಸರ್ಕಾರದ ನಿಯಮಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಯಾರೂ ಬೇಡ ಜಂಗಮರಿಲ್ಲ. ಇಷ್ಟಾದರೂ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆಲವರು ತಮ್ಮ ಮಕ್ಕಳ ಜಾತಿಯನ್ನು ಬೇಡ ಜಂಗಮ ಎಂದು ಶಾಲೆಗಳಲ್ಲಿ ಬರೆಸುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಇನ್ನೋರ್ವ ದಲಿತ ಮುಖಂಡ ನಿಂಗಪ್ಪ ಬನ್ನಿಹಟ್ಟಿ ಒತ್ತಾಯಿಸಿದರು.
ದಾವಣಗೆರೆಯ ಎಸ್ಸಿ – ಎಸ್ಟಿ ಕಾಲೋನಿಗಳಲ್ಲಿ ಒಂದೂ ದಾವಣಗೆರೆ ಒನ್ ಕೇಂದ್ರವಿಲ್ಲ. ಪರಿಶಿಷ್ಟರ ಕಾಲೋನಿಗಳಲ್ಲಿ ದಾವಣಗೆರೆ ಒನ್ ಕೇಂದ್ರ ತೆರೆಯಬೇಕು ಎಂದು ದಲಿತ ಮುಖಂಡ ಸೂರ್ಯ ಪ್ರಕಾಶ್ ಒತ್ತಾಯಿಸಿದರು.
ಸಭೆಯ ವೇದಿಕೆ ಮೇಲೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಎಎಸ್ಪಿ ವಿಜಯ್ ಕುಮಾರ್ ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.