ದಾವಣಗೆರೆ, ಜೂ. 27 – ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳಿನಿಂದ ಒಂದು ವರ್ಷ ಕಾಲ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1964ರಲ್ಲಿ ಕಾಲೇಜು ಸ್ಥಾಪನೆಗೆ ಅಂದಿನ ಶಿಕ್ಷಣ ಸಚಿವ ಎಸ್.ಆರ್. ಕಂಠಿ ಅಡಿಪಾಯ ಹಾಕಿದ್ದರು. ಆಗ ಸರ್ಕಾರಿ ಚಿತ್ರಕಲೆ ಮತ್ತು ಕರಕುಶಲ ಶಾಲೆ ಎಂಬ ಹೆಸರಿಡಲಾಗಿತ್ತು. ಸೆ.16, 1964ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಉದ್ಘಾಟನೆ ನೆರವೇರಿಸಿದ್ದರು ಎಂದು ಹೇಳಿದರು.
ದೃಶ್ಯಕಲಾ ಮಹಾವಿದ್ಯಾಲಯ ಈಗ ಸುಸಜ್ಜಿತ ಕಲಾ ಗ್ಯಾಲರಿ, ಹೊಸ ಶಿಲ್ಪಕಲಾ ಕಾರ್ಯಾಗಾರ, ಅನಿಮೇಷನ್ ವಿಭಾಗ, ವಸತಿ ಯೋಜನೆ, ಥೀಮ್ ಪಾರ್ಕ್, ಫೋಟೋಗ್ರಫಿ, ಡಿಜಿಟಲ್ ಆರ್ಟ್, ಬಯಲು ರಂಗಮಂದಿರ, ಸಮಕಾಲಿನ ಶಿಲ್ಪಕಲೆಗಳ ಬಯಲು ಗ್ಯಾಲರಿ ಮತ್ತು ಆಂಪಿಥಿಯೇಟರ್ ಸೌಲಭ್ಯ ಗಳನ್ನು ಹೊಂದಿದೆ. 12 ಬೋಧಕ ಸಿಬ್ಬಂದಿ ಹಾಗೂ 128 ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.
ಚಿತ್ರಕಲಾ ಶಿಕ್ಷಕರ ನೇಮಕಾತಿ ನಿಲ್ಲಿಸಿದ್ದರಿಂದ ಪ್ರವೇಶ ಕುಸಿತ
ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿ ನಿಲ್ಲಿಸಲಾಗಿದೆ. ಇದರಿಂದಾಗಿ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪ್ರೊ. ಬಿ.ಡಿ. ಕುಂಬಾರ್ ಹೇಳಿದರು.
ದೃಶ್ಯಕಲಾ ಮಹಾವಿದ್ಯಾಲಯಕ್ಕೆ ದಾಖಲಾಗುವವರಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳೇ ಹೆಚ್ಚು. ಸರ್ಕಾರ ಮತ್ತೆ ಚಿತ್ರಕಲಾ ಶಿಕ್ಷಕರನ್ನು ನೇಮಿಸಿಕೊಂಡಲ್ಲಿ ವಿದ್ಯಾರ್ಥಿಗಳ ಸೇರ್ಪಡೆಯೂ ಹೆಚ್ಚಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಕರಕುಶಲ ಶಾಲೆಯಿಂದ ಮಹಾವಿದ್ಯಾಲಯದವರೆಗೆ
1964ರ ಸೆಪ್ಟೆಂಬರ್ 16ರಂದು ಸರ್ಕಾರಿ ಚಿತ್ರಕಲೆ ಮತ್ತು ಕರಕುಶಲ ಶಾಲೆಯ ಹೆಸರಿನಲ್ಲಿ ಆರಂಭವಾದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇದುವರೆಗೂ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲೆ ಹಾಗೂ ಕರಕುಶಲ ಕಲಾ ಶಿಕ್ಷಣ ಪದವಿ ಪಡೆದಿದ್ದಾರೆ.
1992ರಲ್ಲಿ ತಾಂತ್ರಿಕ ಶಿಕ್ಷಣ ವಿಭಾಗದ ಆಡಳಿತದಲ್ಲಿದ್ದ ಕಲಾ ಮತ್ತು ಕರಕುಶಲ ಶಾಲೆಯನ್ನು ಕುವೆಂಪು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಯಿತು. ಕಾಲೇಜಿನ ಮಾನ್ಯತೆ ನೀಡಿ ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ ಎಂದು ಮರು ನಾಕರಣ ಮಾಡಲಾಯಿತು.
ಚಿತ್ರಕಲೆ, ಅನ್ವಯಿಕ ಕಲೆ, ಶಿಲ್ಪಕಲೆ, ಮುದ್ರಣ ಕಲೆ, ಲಿಥೋಗ್ರಪಿ ಹಾಗೂ ಛಾಯಾಗ್ರಹಣಗಳನ್ನು ಈ ಸಂದರ್ಭದಲ್ಲಿ ಸೇರ್ಪಡೆ ಮಾಡಲಾಗಿತ್ತು.
2009-10ರಲ್ಲಿ ದಾವಣಗೆರೆ ವಿಶ್ವವಿದ್ಯಾ ಲಯಕ್ಕೆ ಲಲಿತಕಲಾ ಮಹಾವಿದ್ಯಾಲಯ ಸೇರ್ಪಡೆಯಾಯಿತು. 2012ರಲ್ಲಿ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಯಿತು. ಈಗ ಅನ್ವಯಿಕ ಕಲೆ, ಚಿತ್ರಕಲೆ, ಶಿಲ್ಪಕಲೆ ಮತ್ತು ಆನಿಮೇಷನ್ನಲ್ಲಿ ಬಿ.ವಿ.ಎ. ಹಾಗೂ ಎಂ.ವಿ.ಎ. ಪದವಿಗಳನ್ನು ನೀಡಲಾಗುತ್ತಿದೆ. 2021-22ರಲ್ಲಿ ಪಿ.ಹೆಚ್.ಡಿ. ಸಂಶೋಧನಾ ಅಧ್ಯಯನಕ್ಕೂ ಚಾಲನೆ ನೀಡಲಾಯಿತು.
ಜುಲೈ ತಿಂಗಳಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಸುವ ಮೂಲಕ ವಜ್ರಮಹೋತ್ಸವದ ಚಟುವಟಿಕೆಗಳ ಚಾಲನೆ ನೀಡಲಾಗುವುದು. ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಟೆರಾ ಕೋಟಾ ಕಾರ್ಯಾಗಾರ, ಲಲಿತಕಲಾ ಅಕಾಡೆಮಿ ಕಲಾ ಶಿಬಿರ, ಡಿಜಿಟಲ್ ಕಲಾ ಕಾರ್ಯಾಗಾರ, ವಿಷುಯಲ್ ಆರ್ಟ್ಸ್ ಸಂಕಿರಣ, ಶಿಲ್ಪಕಲಾ ಅಕಾಡೆಮಿಯಿಂದ ಕಲಾ ಶಿಬಿರ, ಹೊಸ ಮಾಧ್ಯಮ ಕಾರ್ಯಾಗಾರ, ರಾಜ್ಯ ಮಟ್ಟದ ಕಲಾ ಶಿಕ್ಷಕರು ಹಾಗೂ ಅಧ್ಯಾಪಕರಿಗೆ ಕಾರ್ಯಾಗಾರ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ರಾಷ್ಟ್ರ ಮಟ್ಟದ ಸೆಮಿನಾರ್‌ನೊಂದಿಗೆ ಸಮಾರೋಪ ನೆರವೇರಿಸಲಾಗುವುದು ಎಂದು ಕುಂಬಾರ್ ತಿಳಿಸಿದರು.
ಕಾಲೇಜಿನ ಶ್ರೀಮಂತ ಇತಿಹಾಸ ದಾಖಲಿಸಲು `60 ವರ್ಷಗಳ ಸೃಜನಶೀಲತೆ : ದೃಶ್ಯ ಕಲೆಗಳ ಕಾಲೇಜಿನ ಕಥೆ’ ಎಂಬ ಸ್ಮರಣ ಪುಸ್ತಕವನ್ನು ಪ್ರಕಟಿಸಲಾಗುವುದು ಎಂದೂ ಅವರು ಹೇಳಿದರು.ಮುಂಬರುವ ದಿನಗಳಲ್ಲಿ ಕಾಲೇಜಿನ ಡಿಜಿಟಲ್ ಹಾಗೂ ಅಂತರ್‌ಶಿಸ್ತೀಯ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದು. ಕೃತಕ ಬುದ್ಧಿವಂತಿಕೆಯ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಜನರ ಸಹಭಾಗಿತ್ವ ಪಡೆಯಲಾಗುವುದು. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪರಿ ಚಯ ಮಾಡಿಸಲು ಟೆಕ್ನಾಲಜಿ ಪಾರ್ಕ್ ನಿರ್ಮಿಸುವ ಉದ್ದೇಶವೂ ಇದೆ ಎಂದು ಕುಂಬಾರ್ ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಯು.ಎಸ್. ಮಹಾಬಲೇಶ್ವರ್, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೈರಾಜ್ ಚಿಕ್ಕಪಾಟೀಲ ಹಾಗೂ ಉಪನ್ಯಾಸಕ ಡಾ. ಸತೀಶಕುಮಾರ್ ವಲ್ಲೇಪುರೆ ಉಪಸ್ಥಿತರಿದ್ದರು.