ಕಾವ್ಯಕ್ಕೆ ಎಂದೂ ಸಾವಿಲ್ಲ, ಕವಿಗೆ ಮುಪ್ಪಿಲ್ಲ

ಕಾವ್ಯಕ್ಕೆ ಎಂದೂ ಸಾವಿಲ್ಲ, ಕವಿಗೆ ಮುಪ್ಪಿಲ್ಲ

ಬರಹಗಾರ್ತಿ ಶಶಿಕಲಾ ವಸ್ತ್ರದ್

ದಾವಣಗೆರೆ, ಜೂ. 27-ಕಾವ್ಯ ಎಂದರೆ ಭಾವನೆ ಮತ್ತು ಭಾವನೆಯ ಆಲೋಚನೆಗಳನ್ನು ಕಂಡುಕೊಳ್ಳುವುದು. ಅದೊಂದು ಸಂಸ್ಕೃತಿ. ಕಾವ್ಯಕ್ಕೆ ಎಂದೂ ಸಾವಿಲ್ಲ. ಕವಿಗೆ ಮುಪ್ಪಿಲ್ಲ ಎಂದು ಹಿರಿಯ ಕವಯತ್ರಿ, ವೈಚಾರಿಕ ಬರಹಗಾರ್ತಿ ಶಶಿಕಲಾ ವಸ್ತ್ರದ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಮೈಸೂರಿನ ಸಂಸ್ಕೃತಿ ಪ್ರಕಾಶನ ಹಾಗೂ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಪ್ರಾಚಾರ್ಯರಾದ ಛಾಯಾ ಶ್ರೀಧರ್ ಅವರ `ದರ್ಪಣ’ ಕವನ ಸಂಕಲನ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪರಕಾಯ ಪ್ರವೇಶ ಮಾಡಬಲ್ಲವರು ಪ್ರಬುದ್ಧ ಕವಿಯಾಗಲು ಸಾಧ್ಯವಿದೆ. ಕಾವ್ಯಕ್ಕೆ ತಾಯ್ತನ ಇರುತ್ತದೆ. ಅದೊಂದು ಭಾವ. ಅದು ಪುರುಷ ಮತ್ತು ಸ್ತ್ರೀಯಲ್ಲಿ ಕಾಣುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಯ್ತನದ ಕೊರತೆ ಕಂಡು ಬರುತ್ತಿದೆ. ಮನುಷ್ಯ ಇಂದು ಪ್ರಾಣಿಗಿಂತ ಕಡೆಯಾಗಿ ವರ್ತಿಸುವುದು ಕಂಡು ಬರುತ್ತಿದ್ದು, ಇದರಿಂದ ಜಗತ್ತು ಅವನತಿಯತ್ತ ಸಾಗುತ್ತಿದೆ ಎಂದು ವಿಷಾದಿಸಿದರು.

ಕವಿಯಾದವನು ಆಡಳಿತ ಪಕ್ಷದಲ್ಲಿನ ತಪ್ಪುಒಪ್ಪುಗಳನ್ನು ಎತ್ತಿ ಹಿಡಿಯುವ ವಿರೋಧ ಪಕ್ಷದ ನಾಯಕನಂತೆ ಕೆಲಸ ಮಾಡಬೇಕಾಗಿದೆ. ಪ್ರಶ್ನೆ ಮಾಡುವ ಮನೋಭಾವನೆ, ಸಾತ್ವಿಕ ರೋಷ ಇರಬೇಕಾಗುತ್ತದೆ. ವ್ಯಕ್ತಿ ಕೇವಲ ಸುಶಿಕ್ಷಿತ, ಸುಸಂಸ್ಕೃತನಾದರಷ್ಟೇ ಸಾಲದು ಸಂಸ್ಕಾರವಂತನಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಹೇಳಿದರು.

ದಮನಿತರ, ಶೋಷಿತರ ಪರ ಕೆಲಸ ಮಾಡುವವ ನಿಜವಾದ ಪ್ರತಿನಿಧಿ. ಕವಿಯಾದವನಿಗೆ ಸೂಕ್ಷ್ಮ ದೃಷ್ಟಿ ಇರಬೇಕು. ಸಮಾಜಕ್ಕೆ ಬುದ್ಧಿವಂತರಿಗಿಂತ ಹೃದಯವಂತರು ಬೇಕಾಗಿದೆ. ಇಂತಹ ಹೃದಯವಂತರನ್ನು ಬೆಳೆಸುವ ಕೆಲಸವನ್ನು ಕಾವ್ಯ ಮಾಡುತ್ತದೆ ಎಂದರು.

ಸ್ತ್ರೀ-ಪುರುಷರ ಪರಸ್ಪರ ಸಹಕಾರವಿಲ್ಲದ ಬದುಕು ಅಪೂರ್ಣ. ಇಲ್ಲಿ ಯಾರು ಶ್ರೇಷ್ಠ, ಯಾರು ಕನಿಷ್ಠ ಅಲ್ಲ. ಇಬ್ಬರು ಸರಿಸಮಾನರು. ಸಹಬಾಳ್ವೆ ಮುಖ್ಯ ಎಂದು ಹೇಳಿದರು.

ಛಾಯಾ ಅವರ `ದರ್ಪಣ’ ಕೃತಿ ಉತ್ತಮವಾಗಿ ಮೂಡಿಬಂದಿದ್ದು, ಆತ್ಮ ಪರಿಶೋಧನೆ ಮಾಡಿಕೊಳ್ಳುವುದೇ ದರ್ಪಣ. ಛಾಯಾ ಅವರಿಂದ ಇನ್ನೂ ಉತ್ತಮ ಕಾವ್ಯ ರಚನೆಯಾಗಲಿ ಎಂದು ಶುಭ ಹಾರೈಸಿದರು.

ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿ, ಛಾಯಾ ಅವರ `ದರ್ಪಣ’ ಕಾವ್ಯ ರಚನೆಯಲ್ಲಿ ಭಾಷೆ ಹಿಡಿತವಿದೆ. ಭಾವನಾತ್ಮಕ ಕವಿತೆಗಳು ರಚನೆಯಾಗಿರುವುದು ಅವರ ಅಧ್ಯಯನ ಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಹಿರಿಯ ಸಾಹಿತಿ ಬಿ.ಟಿ. ಜಾಹ್ನವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ,  ಕವಯತ್ರಿ ಛಾಯಾ ಶ್ರೀಧರ್, ಶ್ರೀಧರ್ ಉಪಸ್ಥಿತರಿದ್ದರು.

ಹೆಚ್.ಎಂ. ಶ್ರೀಧರ್ ಪ್ರಾರ್ಥಿಸಿದರು. ಶ್ರೀಮತಿ ಸಾಹಿತ್ಯ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಶೋಭಾ ಚಪ್ಪರದಳ್ಳಿಮಠ ನಿರೂಪಿಸಿದರು. 

error: Content is protected !!