ಜಗಳೂರು: ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ, ಸರ್ಕಾರದ ವಿರುದ್ಧ ಘೋಷಣೆ
ಜಗಳೂರು, ಜೂ.26- ತಾಲ್ಲೂಕಿನಾದ್ಯಂತ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪಿಸುತ್ತಿರುವ ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಬೃಹತ್ ಘಟಕಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನಂಜುಂಡಸ್ವಾಮಿ ಬಣದ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಕಾರರು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿ ಬಳಿ ಜಮಾಯಿಸಿ ತಹಶೀಲ್ದಾರ್ ಸಯ್ಯದ್ ಖಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿ, ಕಡಿಮೆ ಮಳೆ ಬರುವ ಪ್ರದೇಶ ಹಾಗೂ ಬರ ಪರಿಸ್ಥಿತಿಗೆ ಹೆಸರಾದರೂ ರೈತ ಹಾಗೂ ಪ್ರಗತಿ ಪರ ಸಂಘಟನೆಗಳ ನಿರಂತರ
ಹೊರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ನೀರು ತಲುಪುವ ನಿರೀಕ್ಷೆಯಲ್ಲಿ ಇರುವಾಗ, ತಾಲ್ಲೂಕಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳಾದ ರಿನ್ಯೂವ್ ಮತ್ತು ಕ್ಲೀನ್ ಮ್ಯಾಕ್ಸ್ ಕಂಪನಿಗಳು ಅಕ್ರಮ ಮತ್ತು ಅನಧಿಕೃತವಾಗಿ ಕೃಷಿ ಯೋಗ್ಯ ಭೂಮಿಗಳನ್ನು ರೈತರ ಅಮಾಯಕ ಪರಿಸ್ಥಿತಿಯಿಂದ ಕಿತ್ತುಕೊಂಡು ಅಟ್ಟಹಾಸ ಮೆರೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲ್ಲೂಕು ಜಂಟಿ ಕಾರ್ಯದರ್ಶಿ ಭರಮಸಮುದ್ರ ಕುಮಾರ್ ಮಾತನಾಡಿ, ತಾಲ್ಲೂಕಿನಾದ್ಯಂತ ನಿಯಮಬಾಹಿರವಾಗಿ ವಿಂಡ್ ಫ್ಯಾನ್ ಅಳವಡಿಕೆ ಮಾಡಲಾಗುತ್ತಿದೆ.
ಕಂದಾಯ ಇಲಾಖೆ ನೋಟೀಸ್ಗಳನ್ನು ಗಾಳಿಗೆ ತೂರಿ,ಇಂಧನ ಇಲಾಖೆ ಸಿಆರ್ ಎಡಿಎಲ್ ಇ
ನಾ 22 ಷರತ್ತುಬದ್ದ ನಿಯಮಗಳನ್ನು ಲೆಕ್ಕಿಸದೆ
ಭೂ ಕಂದಾಯ ಅಧಿನಿಯಮ 1964 ರ ಕಲಂ 192(ಎ) ತಿದ್ದುಪಡಿಯ ಪ್ರಕಾರ ಯಾವುದೇ ಭೂಮಿಯನ್ನು ಪರಿವರ್ತನೆ ಮಾಡದೆ,
ದೇವರ ಹೊಲಗಳು, ಸರ್ಕಾರಿ ಗೋಮಾಳ ಜಮೀನುಗಳನ್ನು ಆಕ್ರಮಣ ಮಾಡಿಕೊಂಡಿವೆ. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಜಯರಾಮಪ್ಪ, ಲೊಕೇಶ್, ಲಕ್ಷ್ಮಣನಾಯಕ, ಪಾಲನಾಯಕ, ಮಲ್ಲಿಕಾರ್ಜುನಪ್ಪ, ಮಹಾಂತೇಶ್, ತಿಪ್ಪೇಸ್ವಾಮಿ, ಹೊನ್ನೂರ ಅಲಿ, ರಂಗಪ್ಪ, ನಾಗರಾಜ್, ಹನುಮಂತಪ್ಪ, ಹೇಮಾರೆಡ್ಡಿ, ರಂಗಪ್ಪ, ಮಂಜಪ್ಪ ಮುಂತಾದವರು ಭಾಗವಹಿಸಿದ್ದರು.