ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ಆರೋಪ
ದಾವಣಗೆೆರೆ, ಜೂ. 26-ಜಲಸಿರಿ ಯೋಜನೆಯಡಿ ವಿದ್ಯುತ್ ಬಿಲ್ ನೀಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಿರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆಯಾಗುವವರೆಗೂ ಬಿಲ್ ಪಾವತಿಗೆ ಸಾರ್ವಜನಿಕರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೂ ಪಾಲಿಕೆ ಆಯುಕ್ತರು ಜೂನ್ ತಿಂಗಳಿಂದ ಶುಲ್ಕ ಸಂಗ್ರಹಿಸಲು ಕೆಯುಐಡಿಎಫ್‌ಸಿ ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಮೇಯರ್ ಸುದ್ದಿಗೋಷ್ಠಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದರು.
ಪಾಲಿಕೆಯಲ್ಲಿ ಅಧಿಕಾರಿಗಳದ್ದೇ ಆಡಳಿತ ಅಧಿಕವಾಗಿದ್ದು, ಇದರಿಂದ ಪಾಲಿಕೆ ಮೇಯರ್ ಮತ್ತು ಸದಸ್ಯರು ಹತಾಶೆಗೊಂ ಡಿದ್ದಾರೆ ಎಂದು ದೂರಿದರು.
ಜಲಸಿರಿ ಬಿಲ್ ಕಟ್ಟಿಸಿಕೊಳ್ಳದಂತೆ ವಿರೋಧ ಪಕ್ಷದ ಸದಸ್ಯರು ಒತ್ತಡ ತಂದಿದ್ದಕ್ಕೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಆಡಳಿತ ಪಕ್ಷದವರು ಹೇಳುತ್ತಿದ್ದಾರೆ. ಸಚಿವರಿಗೂ ಜಲಸಿರಿ ಬಿಲ್ ಪಾವತಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯ ಸಭೆಯ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಯಶೋಧ ಯಗ್ಗಪ್ಪ, ಸದಸ್ಯ ಕೆ.ಎಂ. ವೀರೇಶ್ ಉಪಸ್ಥಿತರಿದ್ದರು.