ಜಲಸಿರಿ ವಿದ್ಯುತ್ ಬಿಲ್ ರದ್ದುಪಡಿಸಲು ಆಗ್ರಹ

ಜಲಸಿರಿ ವಿದ್ಯುತ್ ಬಿಲ್ ರದ್ದುಪಡಿಸಲು ಆಗ್ರಹ

ದಾವಣಗೆರೆ,ಜೂ. 24- ಜಲಸಿರಿ ಯೋಜನೆಯಡಿ ವಿತರಣೆ ಮಾಡುತ್ತಿರುವ ಬಿಲ್‌ಗಳನ್ನು 48 ಗಂಟೆಯೊಳಗೆ ರದ್ದುಪಡಿಸಬೇಕು ಮತ್ತು ಸಾಮಾನ್ಯ ಸಭೆ ನಡೆಸಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಜಲಸಿರಿ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ನಿಯಮ ಬಾಹಿರವಾಗಿ ಜಲಸಿರಿ ಬಿಲ್ ನೀಡಲಾಗುತ್ತಿದೆ. 24* 7 ಜಲಸಿರಿ ಯೋಜನೆಯಡಿ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಣೆ ಮಾಡಬೇಕಾಗಿತ್ತು. ಆದರೆ ಮಹಾನಗರ ಪಾಲಿಕೆ ಕೆಲವು ಭಾಗಗಳಿಗೆ 7-8 ದಿನಗಳಿಗೊಮ್ಮೆ  ನೀರು ಸರಬರಾಜು ಮಾಡುತ್ತಿದ್ದು, ಆದರೂ ಸಾರ್ವಜನಿಕರಿಗೆ ಬಿಲ್ ನೀಡಲಾಗುತ್ತಿದೆ. ಬಿಲ್ ನೀಡದಂತೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ಆಗಿದೆ. ಆದರೂ ಬಿಲ್ ವಿತರಣೆ ಕ್ರಮ ಸರಿಯಲ್ಲ. ಈ ಕೂಡಲೇ ಬಿಲ್ ವಿತರಣೆಯನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರ ಸ್ವಚ್ಛತೆ, ಸಮರ್ಪಕ ಕುಡಿಯುವ ನೀರು ಸರಬರಾಜು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಕೂಡಲೇ ಸಾಮಾನ್ಯ ಸಭೆ ಕರೆಯಬೇಕು ಎಂದು ಆಯುಕ್ತರು, ಮೇಯರ್, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಮೇಯರ್ ಅಧಿಕಾರವಧಿ ಮುಕ್ತಾಯವಾಗಿದೆ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಕರ್ನಾಟಕ ಪೌರ ಅಧಿನಿಯಮದ ಅಧ್ಯಾಯ ಮೂರರ ಪ್ರಕಾರ ಮುಂದಿನ ಮೇಯರ್ ಆಯ್ಕೆಯಾಗುವವರೆಗೂ ಹಾಲಿ ಮೇಯರ್ ಅಧಿಕಾರದಲ್ಲಿ ಮುಂದುವರೆಯಬಹುದು ಮತ್ತು ಸಾಮಾನ್ಯ ಸಭೆ ನಡೆಸಬಹುದಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಎಸ್.ಟಿ. ವೀರೇಶ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಉಪಮೇಯರ್ ಯಶೋಧ ಹೆಗ್ಗಪ್ಪ, ಉಮಾ ಪ್ರಕಾಶ್, ಗಾಯತ್ರಿಬಾಯಿ ಖಂಡೋಜಿರಾವ್, ಕೆ.ಎಂ. ವೀರೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!