ಸರ್ಕಾರಕ್ಕೆ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಶ್ರೀ ಒತ್ತಾಯ
ದಾವಣಗೆರೆ, ಜೂ. 20- ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿತ್ತು. ವಿಶ್ವ ಮಟ್ಟದಲ್ಲಿ `ಯೋಗ’ ಕ್ಕೆ ಬೆಲೆ ಬಂದಿದೆ ಎಂದರೆ ಅದಕ್ಕೆ ನಮ್ಮ ದೇಶದ ಋಷಿಮುನಿಗಳು ಕೊಟ್ಟ ಕೊಡುಗೆ ಕಾರಣವಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.
ಭಾರತ ಋಷಿ ಪರಂಪರೆಯ ದೇಶ. ಋಷಿ ಪರಂಪರೆಗೆ ಯೋಗ ಅಡಿಪಾಯ. ಇಡೀ ಜಗತ್ತಿಗೇ `ಯೋಗ’ ದ ಕೊಡುಗೆ ನೀಡಿದ ದೇಶ ನಮ್ಮದು. ಯೋಗ ಕಲಿಯುವುದರಿಂದ ಮಾನಸಿಕ ಮತ್ತು ಬಾಹ್ಯ ಎರಡಕ್ಕೂ ಆರೋಗ್ಯ ಉಂಟಾಗುತ್ತದೆ ಎಂದರು.
ಶಾಲಾ ಪಠ್ಯಪುಸ್ತಕದಲ್ಲಿ `ಯೋಗ’ ವಿಷಯವನ್ನು ಅಳವಡಿಕೆ ಮಾಡುವಲ್ಲಿ ಸರ್ಕಾರ ಮುಂದಾಬೇಕಾಗಿದೆ. ವಿದ್ಯಾರ್ಥಿಗಳಿಗೆ `ಯೋಗ’ ವರದಾನವಾಗಿದೆ. ಜೀವನದ ಸವಾಲುಗಳ ಮಧ್ಯೆ ಗೆದ್ದು ಬರಲು ಶಾಂತವಾದ ಮನಸ್ಸು ಅವಶ್ಯ. ಅದು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಭಾರತದ ಆಧ್ಯಾತ್ಮ ಮತ್ತು ಯೋಗದ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಭಾರತದಲ್ಲಿ ನಾವುಗಳು ಕೇವಲ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಸೇರಿದಂತೆ ಅನೇಕ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ಭಾರತದ `ಯೋಗ’ವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬೆಳಿಗ್ಗೆ 5.30 ಕ್ಕೆ ಯೋಗ ಗುರು ಚನ್ನಬಸವಣ್ಣ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. 500 ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿದ್ದರು.
ಯೋಗ ಗುರುಗಳಾದ ಕಣಕುಪ್ಪಿ ಕರಿಬಸಪ್ಪ, ನೀಲಪ್ಪ ಮತ್ತಿತರರು ಯೋಗ ಕುರಿತು ಅನುಭವ ಹಂಚಿಕೊಂಡು, ಮಾರ್ಗದರ್ಶನ ನೀಡಿದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ವಿವಿಧ ಯೋಗ ಕೇಂದ್ರಗಳ ಶಿಕ್ಷಕರು ಉಪಸ್ಥಿತರಿದ್ದರು.