45ನೇ ವಸಂತಕ್ಕೆ ಕಾಲಿಟ್ಟ ರಾಜನಹಳ್ಳಿ ಶ್ರೀಗಳು

45ನೇ ವಸಂತಕ್ಕೆ ಕಾಲಿಟ್ಟ ರಾಜನಹಳ್ಳಿ ಶ್ರೀಗಳು

ಮಲೇಬೆನ್ನೂರು, ಜೂ. 19- ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ತಮ್ಮ ಸಾರ್ಥಕ ಬದುಕಿನ 44 ವರ್ಷಗಳನ್ನು ಪೂರೈಸಿ, ಮಂಗಳವಾರ 45ನೇ ವಸಂತಕ್ಕೆ ಕಾಲಿಟ್ಟರು.

ಶ್ರೀಗಳು ತಮ್ಮ ಜನ್ಮ ದಿನದ ಅಂಗವಾಗಿ ಮಂಗಳವಾರ ಬೆಳಿಗ್ಗೆ ವಾಲ್ಮೀಕಿ ಗುರುಪೀಠದಲ್ಲಿರುವ ಲಿಂ. ಜಗದ್ಗುರುಗಳಾದ ಶ್ರೀ ಪುಣ್ಯಾನಂದಪುರಿ ಶ್ರೀಗಳವರ ಗದ್ದುಗೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಮಠದ ಶಾಲೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಶ್ರೀಗಳು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಈ ವೇಳೆ ಹಾಜರಿದ್ದ ಶಾಸಕ ಬಿ.ಪಿ. ಹರೀಶ್ ಅವರು ಶ್ರೀಗಳ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಶಾಲೆಯ ಮುಂಭಾಗದಲ್ಲಿ ಶಾಸಕರ ಅನುದಾನದಲ್ಲಿ ಮಕ್ಕಳ ಉದ್ಯಾನವನ ನಿರ್ಮಿಸಿಕೊಡುವುದಾಗಿ ಹೇಳಿದರು. ಸದಾ ಸಮಾಜಮುಖಿ ಯಾಗಿ ಹೋರಾಟ ಮಾಡುವ ಶ್ರೀಗಳಿಗೆ ಭಗವಂತ ಆಯುರಾರೋಗ್ಯ ಭಾಗ್ಯ ನೀಡಲೆಂದು ಪ್ರಾರ್ಥಿಸಿದರು.

ತಣಿಗೆರೆಯ ಸನ್ನಿ ರಾಜಮನೆ ಅವರು ರಾಜಮನೆ ಫೌಂಡೇಷನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ನೋಟ್‌ಬುಕ್, ಪೆನ್ನುಗಳನ್ನು ವಿತರಿಸಿದರು.

ಕಳೆದ 19 ವರ್ಷಗಳಿಂದ ಪ್ರತಿ ವರ್ಷ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಅಗತ್ಯವಾದ ನೋಟ್‌ ಬುಕ್, ರಾಪಿಡೆಕ್ಸ್ ಕೋರ್ಸ್ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಿಗೆ ನೆರವಾಗುತ್ತಿರುವ ಸನ್ನಿ ರಾಜಮನೆ ಅವರನ್ನು ಶ್ರೀಗಳು ಹಾಗೂ ಶಾಸಕ ಹರೀಶ್ ಅವರು ಸನ್ಮಾನಿಸಿ, ಅಭಿನಂದಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುತ್ತೂರು ಚಂದ್ರಪ್ಪ, ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ನಗರಸಭೆ ಸದಸ್ಯ ದಿನೇಶ್ ಬಾಬು, ಮಕರಿ ಪಾಲಾಕ್ಷಪ್ಪ, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ನಿವೃತ್ತ ಶಿಕ್ಷಕ ಜಿ.ಆರ್. ನಾಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್, ಹಂಚಿನಮನೆ ದೇವೇಂದ್ರಪ್ಪ, ಕೆ. ರಾಜು, ಶಾಲಾ ಮುಖ್ಯ ಶಿಕ್ಷಕ ಸಿದ್ದೇಶ್, ಮಠದ ವ್ಯವಸ್ಥಾಪಕ ರಾಜನಹಳ್ಳಿ ಭೀಮಣ್ಣ, ಮಠದ ಹುಡುಗರಾದ ಡ್ರೈವರ್ ಮಂಜು, ರವಿ, ತಿಪ್ಪೇಸ್ವಾಮಿ, ಸಿದ್ದು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

ಸಂಜೆ ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾ ರ್ಜುನ್, ಜಗಳೂರು ಶಾಸಕ ದೇವೇಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಮಠಕ್ಕೆ ಆಗಮಿಸಿ, ಶ್ರೀಗಳಿಗೆ ಶುಭಾಶಯ ಕೋರಿದರು.

error: Content is protected !!