ದಾವಣಗೆರೆ, ಜೂ. 18 – ಕಳೆದ ವರ್ಷ ಜಾರಿಯಾದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ಆದ ಗಾಯ ಇನ್ನೂ ಹಸಿಯಾಗಿರುವಾಗಲೇ, ಡೀಸೆಲ್ ಬೆಲೆ ಏರಿಕೆಯ ಬರೆ ಬಿದ್ದಿದೆ!
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ನಂತರ ಖಾಸಗಿ ಬಸ್‌ಗಳಿಗೆ ಬರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ನಡುವೆ, ಮಾಲೀಕರು ಡೀಸೆಲ್ ಬೆಲೆ ಏರಿಕೆಯ ವೆಚ್ಚವನ್ನೂ ಭರಿಸುವ ಸಾಹಸ ಮಾಡಬೇಕಿದೆ.
ಹಿಂದೆಲ್ಲಾ ಡೀಸೆಲ್ ಇತ್ಯಾದಿ ದರಗಳು ಹೆಚ್ಚಳವಾದಾಗ ಪ್ರಯಾಣ ದರ ಹೆಚ್ಚಿಸುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಆದರೆ, ಈಗ ಒಂದೆಡೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್ ಸೌಲಭ್ಯ ಇರುವಾಗ, ಖಾಸಗಿ ಬಸ್‌ಗಳು ಬೆಲೆ ಏರಿಕೆ ಮಾಡುವುದು ಕಡು ಕಷ್ಟವಾಗಲಿದೆ.
ಈಗಂತೂ ಖಾಸಗಿ ರೂಟ್ ಬಸ್‌ಗಳಲ್ಲಿ ಲಾಭದ ಮಾತಿರಲಿ, ಖರ್ಚು-ವೆಚ್ಚಗಳು ಸರಿದೂಗಿದರೆ ಸಾಕು ಎನ್ನುವಂತಾಗಿದೆ. ಸಾಕಷ್ಟು ರೂಟ್‌ಗಳಲ್ಲಿ ಮಾಲೀಕರು ಕೈಯಿಂದ ಡೀಸೆಲ್‌ಗೆ ದುಡ್ಡು ಹಾಕುವ ಪರಿಸ್ಥಿತಿ ಇದೆ. ಸಾಮಾನ್ಯ ರೂಟ್‌ಗಳಲ್ಲಿ ಪ್ರತಿದಿನ ಬಸ್ ಒಂದಕ್ಕೆ 6,500 ರೂ.ಗಳವರೆಗೆ ಖರ್ಚಾಗುತ್ತದೆ. ಆದರೆ, ಇಷ್ಟು ಖರ್ಚನ್ನು ಸರಿದೂಗಿಸುವಷ್ಟು ಆದಾಯ ಬರುತ್ತಿಲ್ಲ. ಡೀಸೆಲ್‌ಗೆ ಕೈಯಿಂದ ಹಣ ಹಾಕುವ ಪರಿಸ್ಥಿತಿ ಬರುತ್ತಿದೆ ಎಂದು ಖಾಸಗಿ ವಲಯದವರು ಹೇಳುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಖಾಸಗಿ ಬಸ್ ವಲಯದಲ್ಲಿ ಉದ್ಯೋಗ ಕಡಿತ ಕಾಣುತ್ತಿದೆ. ಈ ವಲಯದ ಡ್ರೈವರ್ ಹಾಗೂ ಕಂಡಕ್ಟರ್‌ಗಳೂ ತಿಂಗಳಿಗೆ ನಾಲ್ಕು ಕಾಸು ಕಂಡರೆ ಅದೇ ಪುಣ್ಯ ಎನ್ನುವಂತಾಗಿದೆ.
ಈ ಹಿಂದೆ ಸೀಸನ್ ಇಲ್ಲದ ಸಮಯದಲ್ಲೂ ಬಸ್‌ನಲ್ಲಿ 35-40 ಜನ ಇರುತ್ತಿದ್ದರು. ಈಗ ಸೀಸನ್ ಇಲ್ಲದ ಸಮಯದಲ್ಲಿ ನಾಲ್ಕು ಜನವೂ ಬಸ್‌ಗೆ ಹತ್ತುವುದಿಲ್ಲ. ಹೀಗಾಗಿ ಖಾಸಗಿ ನಿಲ್ದಾಣದ ಸಾಕಷ್ಟು ಬಸ್‌ಗಳು ಪ್ರಯಾಣಿಕರಿಲ್ಲದೇ ತಟಸ್ಥವಾಗಿವೆ. ಪ್ರಯಾಣಿಕರು ಬಂದರೆ ಮಾತ್ರ ಬಸ್‌ಗಳು ಸಕ್ರಿಯವಾಗುತ್ತವೆ, ಇಲ್ಲವಾದರೆ ಸುಮ್ಮನೆ ಸ್ಟ್ಯಾಂಡ್‌ನಲ್ಲಿ ನಿಂತಿರುತ್ತವೆ ಎಂದು ಬಸ್ ಏಜೆಂಟರು ಹೇಳುತ್ತಾರೆ.
ವಿಷ ಕುಡಿಯುವ ಪರಿಸ್ಥಿತಿಯಿದೆ
ಸರ್ಕಾರದ ಉಚಿತ ಪ್ರಯಾಣ ಯೋಜನೆಯಿಂದಾಗಿ 50 ವರ್ಷಗಳಿಂದ ಖಾಸಗಿ ಬಸ್ ವಲಯದಲ್ಲಿ ಕೆಲಸ ಮಾಡುತ್ತಾ ಬಂದವರು ಈಗ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಮಲ್ಲೇಶಪ್ಪ ವ್ಯಥೆಪಟ್ಟಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಹಾಗೂ ತೃತೀಯ ಲಿಂಗಿಯರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ ಇದು ಉಚಿತ ಭಾಗ್ಯವಲ್ಲ ಎಂದೂ ಅವರು ಹೇಳಿದರು.
ಆದರೆ, ಖಾಸಗಿ ಬಸ್‌ಗಳ ಮಾಲೀಕರು ಮಾತ್ರ ಡೀಸೆಲ್ನಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲರ ವೆಚ್ಚವನ್ನು ನಿಭಾಯಿಸಬೇಕು. ಜೊತೆಗೆ ವರ್ಷಕ್ಕೆ 2 ಲಕ್ಷ ರೂ.ಗಳ ರಸ್ತೆ ತೆರಿಗೆಯನ್ನೂ ಪಾವತಿಸಬೇಕು. ಹೀಗಾದಲ್ಲಿ ಖಾಸಗಿ ಬಸ್ ಮಾಲೀಕರು ಉಳಿಯುವುದಾದರೂ ಹೇಗೆ? ನಾವು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದವರು ನೋವಿನಿಂದ ಹೇಳಿದರು.
ಕೇವಲ ಮಾಲೀಕರಷ್ಟೇ ಅಲ್ಲದೇ, ಕಾರ್ಮಿಕರು, ಆಟೊಮೊಬೈಲ್ ಸೇರಿ ದಂತೆ ಲಕ್ಷಾಂತರ ಜನರು ಖಾಸಗಿ ಬಸ್ಗಳನ್ನು ಅವಲಂಬಿಸಿದ್ದಾರೆ. ಖಾಸಗಿ ಬಸ್ ವಲಯ ಕುಸಿದರೆ ಲಕ್ಷಾಂತರ ಜನ ಹಾಳಾಗಿ ಹೋಗುತ್ತಾರೆ ಎಂದವರು ಹೇಳಿದರು.
ಖಾಸಗಿ ವಲಯಕ್ಕೆ ನೆರವಾಗುವ ಯಾವುದೇ ಕ್ರಮವನ್ನು ಸರ್ಕಾರ ಇದುವ ರೆಗೂ ತೆಗೆದುಕೊಂಡಿಲ್ಲ. ನಾವು ಮುಂದಿನ ಕ್ರಮಗಳ ಬಗ್ಗೆ ಎರಡು ದಿನಗಳಲ್ಲಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಲ್ಲೇಶಪ್ಪ ತಿಳಿಸಿದರು.
ಖಾಸಗಿ ವಲಯಕ್ಕೆ ಏಕಿಲ್ಲ ನೆರವು?
ಶಕ್ತಿ ಯೋಜನೆಯಿಂದ ಬಡವರಿಗೆ ನೆರವಾಗಿದೆ. ಆದರೆ, ಈ ಯೋಜನೆಯನ್ನು ಖಾಸಗಿ ವಲಯಕ್ಕೂ ವಿಸ್ತರಿಸೇಕು. ನಾವು ಹಿಂದಿನಿಂದಲೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದೇವೆ. ನಮಗೂ ಶಕ್ತಿ ಯೋಜನೆ ವಿಸ್ತರಿಸಿದರೆ ಇನ್ನಷ್ಟು ಉತ್ತಮ ಸೇವೆ ಕೊಡುತ್ತೇವೆ ಎಂದು ಖಾಸಗಿ ಬಸ್ ಏಜೆಂಟ್ ಆರ್.ಜಿ. ಸತ್ಯನಾರಾಯಣ ಹೇಳುತ್ತಾರೆ.
ದುಡಿಮೆಗೆ ಸಿಗುತ್ತಿಲ್ಲ ಆದಾಯ
ಮೊದಲೆಲ್ಲಾ ದಿನಕ್ಕೆ 800- 1000 ರೂ. ಆದಾಯ ಸಿಗುತ್ತಿತ್ತು. ಈಗ ತಿಂಗಳಿಗೆ 3 ಸಾವಿರ ರೂ. ಗಳಿಸಲೂ ಕಷ್ಟ ಪಡಬೇಕಿದೆ. ಮೊದಲೆಲ್ಲ ಬಸ್‌ಗೆ ಮೂವರು ಕೆಲಸದವರು ಇರುತ್ತಿದ್ದೆವು. ಈಗ ಇಬ್ಬರೇ ನಿರ್ವಹಿಸುತ್ತಿದ್ದೇವೆ ಎಂದು ಖಾಸಗಿ ಬಸ್ ಏಜೆಂಟ್ ರಫೀಕ್ ಹೇಳುತ್ತಾರೆ.
ಇದರ ಜೊತೆಗೆ, ವರ್ಷಗಳಿಂದ ಖಾಸಗಿ ಬಸ್‌ಗಳಿದ್ದ ಮಾರ್ಗದಲ್ಲಿ ಈಗ ಸರ್ಕಾರಿ ಬಸ್‌ಗಳು ಸಂಚರಿಸುತ್ತಿವೆ. ಹೀಗಾಗಿ ಖಾಸಗಿ ಬಸ್‌ಗಳ ಆದಾಯ ಗಳಿಸುವ ದಾರಿಗಳು ಮುಚ್ಚುತ್ತಿವೆ.
ಪರ್ಮಿಟ್ಟು ತಂದ ಇಕ್ಕಟ್ಟು : ಪ್ರತಿ ಖಾಸಗಿ ಬಸ್‌ಗೆ ಮೂರು ತಿಂಗಳಿಗೊಮ್ಮೆ ರಸ್ತೆ ತೆರಿಗೆ ಕಟ್ಟಲೇಬೇಕಿದೆ. ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಬೇಕು ಎಂದರೆ, ರೂಟ್ ಪರ್ಮಿಟ್ ಅನ್ನು ಸಾರಿಗೆ ಇಲಾಖೆಗೆ ಮರಳಿಸಬೇಕು. ಆದರೆ, ಕೆಲವರು ಬಸ್ ಮೇಲೆ ಸಾಲ ಪಡೆದಿದ್ದಾರೆ. ಹೀಗಿರುವಾಗ ಪರ್ಮಿಟ್ ಮರಳಿಸಬೇಕೋ ಅಥವಾ ಬಸ್ ಓಡಿಸಬೇಕೋ ಎಂಬ ಇಕ್ಕಟ್ಟಿನ ಪರಿಸ್ಥಿತಿ ಇದೆ.
ಈ ಎಲ್ಲ ಸಮಸ್ಯೆಗಳ ಸುಳಿಯಿಂದಾಗಿ ಹಳೆಯ ಬಸ್‌ಗಳಿಗೆ ಇದ್ದ ಬೇಡಿಕೆ ಕಡಿಮೆಯಾಗಿದೆ. ಹಳೆ ಬಸ್ ಮೌಲ್ಯ ಶೇ.25-30ರವರವರೆಗೆ ಕಡಿಮೆಯಾಗಿದೆ ಎಂದು ಖಾಸಗಿ ಬಸ್ ವಲಯದವರು ಹೇಳುತ್ತಿದ್ದಾರೆ.
ಮಳಿಗೆಗಳೂ ಖಾಲಿ : ಖಾಸಗಿ ಬಸ್ ನಿಲ್ದಾಣದಲ್ಲಿ 90ಕ್ಕೂ ಹೆಚ್ಚು ಮಳಿಗೆಗಳಿವೆ. ಈ ಮಳಿಗೆಗಳಲ್ಲಿ ಬಹುತೇಕವು ಈಗ ಖಾಲಿಯಾಗಿವೆ. ಕೆಲವು ಮಾತ್ರ ವಹಿವಾಟು ನಡೆಸುತ್ತಿವೆ. ಇವುಗಳಲ್ಲಿ ಕೈ ಬೆರೆಳಣಿಕೆಯಷ್ಟು ಮಾತ್ರ ಗ್ರಾಹಕರನ್ನು ಕಾಣುತ್ತಿವೆ.
ಶಕ್ತಿ ಯೋಜನೆಯ ನಂತರ ಉಂಟಾಗಿರುವ ಪರಿಸ್ಥಿತಿ ಇಂದಲ್ಲಾ ನಾಳೆ ಬದಲಾಗಬಹುದು ಎಂಬ ಆಶಾಭಾವನೆಯೊಂದಿಗೆ ಖಾಸಗಿ ಬಸ್ ಮಾಲೀಕರು ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ವರ್ಷ ಕಳೆದರೂ ಅವರಿಗೆ ಸಮಾಧಾನದ ಗ್ಯಾರಂಟಿ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಖಾಸಗಿ ಬಸ್ ವಲಯ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಕಳವಳ ಇದೆ.