ದಾವಣಗೆರೆ, ಜೂ. 18 – ಇತ್ತೀಚೆಗೆ ನಡೆದ ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆಯನ್ನು ಖಂಡಿಸಿ ವೀರಶೈವ ಜಂಗಮ ಸಮಾಜದಿಂದ ನಗರದ ಜಯದೇವ ವೃತ್ತದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ಯಾಂಡಲ್ ಲೈಟ ಮೂಲಕ ಮೃತ ರೇಣುಕಾಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರೇಣುಕಸ್ವಾಮಿಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ನಟ ದರ್ಶನ್ ಹಾಗೂ ಸಹಚರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಯಿತು.
ದರ್ಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, `ಕಾನೂನು ರೀತಿಯಲ್ಲಿ ತೀವ್ರ ಶಿಕ್ಷೆ ವಿಧಿಸಿ’ ‘ರಾಜಕೀಯ ಒತ್ತಡಕ್ಕೆ ಮಣಿಯಬೇಡಿ’ ಹಾಗೂ ‘ರೇಣುಕಸ್ವಾಮಿ ಸಾವಿಗೆ ನ್ಯಾಯ ಕೊಡಿ’ ಎಂದು ಘೋಷಣೆ ಕೂಗಿದರು.
ವೀರಶೈವ ಜಂಗಮ ಸಮಾಜದ ಮುಖಂಡ ಎನ್.ಎ.ಮುರುಗೇಶ್ ಮಾತನಾಡಿ, ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ದರ್ಶನ್ ಪೊಲೀಸರಿಗೆ ದೂರು ನೀಡಬಹುದಾಗಿತ್ತು. ಆದರೆ ಕಾನೂನು ಕೈಗೆತ್ತಿಕೊಂಡು ಕ್ರೂರವಾಗಿ ವರ್ತಿಸಿದ ರೀತಿಯನ್ನು ಗಮನಿಸಿದರೆ ದರ್ಶನ್ ಕರಾಳ ಮುಖ ಬಯಲಿಗೆ ಬಂದಿದೆ ಎಂದರು.
ಅಮಾಯಕ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ತೀವ್ರ ಖಂಡನೀಯ. ಅತ್ಯಂತ ಪ್ರಭಾವಿಯಾಗಿರುವ ದರ್ಶನ್ ವಿರುದ್ಧ ಪೊಲೀಸರು ಕೈಗೊಂಡಿರುವ ಕಾನೂನು ಕ್ರಮ ಶ್ಲ್ಯಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಮುರುಗೇಶ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರ ವತಿಯಿಂದ ಮೃತ ರೇಣುಕಸ್ವಾಮಿ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವಂತೆ ಒತ್ತಾಯಿಸಿದರು. ದರ್ಶನ್ ಕಾನೂನು ಪ್ರಕಾರ ನಡೆದುಕೊಳ್ಳುವ ಬದಲು ಕಾನೂನನ್ನೇ ಕೈಗೆತ್ತಿಕೊಂಡಿದ್ದು ಅಕ್ಷಮ್ಯ. ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವುದು ಕ್ರೌರ್ಯದ ಪರಮಾ ವಧಿ. ಇಂತಹದೇ ಕ್ರೌರ್ಯದಿಂದ ನೇಹಾ ಹತ್ಯೆ ನಡೆದಿತ್ತು. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ವಿಧಿಸಲು ನೆಲದ ಕಾನೂನು ಇದೆ ಎಂದು ಸಾಹಿತಿ ಬಾ.ಮ.ಬಸವರಾಜಯ್ಯ ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯ ಹೆಚ್.ಎಂ. ರುದ್ರಮುನಿಸ್ವಾಮಿ, ವೀರಶೈವ ಜಂಗಮ ಸಮಾಜದ ಮುಖಂಡರಾದ ಎ.ಎಂ.ಕೊಟ್ರೇಶ್, ದಾಕ್ಷಾಯಣಮ್ಮ, ಪುಷ್ಪಾ, ರಾಜೇಶ್ವರಿ, ಪಿ.ಜಿ.ರಾಜಶೇಖರ್, ಇತರ ಗಣ್ಯರು ಈ ಸಂದರ್ಭದಲ್ಲಿದ್ದರು.