ವ್ಯಕ್ತಿತ್ವ ವಿಕಸನಗೊಳಿಸುವುದು ನಿಜವಾದ ಶಿಕ್ಷಣ

ವ್ಯಕ್ತಿತ್ವ ವಿಕಸನಗೊಳಿಸುವುದು ನಿಜವಾದ ಶಿಕ್ಷಣ

ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್

ದಾವಣಗೆರೆ, ಜೂ. 16- ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನಗೊಳಿಸುವುದು ನಿಜವಾದ ಶಿಕ್ಷಣ. ನೈತಿಕ ಮೌಲ್ಯಗಳನ್ನು ಹೆಚ್ಚಿಸಲು ಶಿಕ್ಷಣ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶವಾಗಬೇಕು. ಶಿಕ್ಷಣ ವನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸುವುದು ಸರಿಯಲ್ಲ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಬೇಡವಾದ ವಿಷಯ ಗಳಿಗೆ ಮೊಬೈಲ್ ಬಳಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿರುವುದು ಕಂಡುಬರುತ್ತಿದೆ. ಉಪ ಯುಕ್ತ ಮಾಹಿತಿಗಾಗಿ ಬಳಕೆ ಅಗತ್ಯ ಎಂದರು.

ಉನ್ನತ ಹುದ್ದೆಗಳಲ್ಲಿರುವ ಬಹುತೇಕರು ಗ್ರಾಮೀಣ ಪ್ರದೇಶದ, ಬಡತನ ಅನುಭವಿಸಿ ಬಂದಂತವರೇ ಆಗಿರುತ್ತಾರೆ. ಅಬ್ದುಲ್ ಕಲಾಂ, ನಾರಾಯಣ್ ಸೇರಿದಂತೆ ಅನೇಕರನ್ನು ಉದಾಹರಿಸಿದ ಅವರು, ಸತತ ಪರಿಶ್ರಮ, ಆಸಕ್ತಿ ಇದ್ದಲ್ಲಿ ಸಾಧನೆ ಸುಲಭವಾಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು ಎಂದು ಹೇಳಿದರು.

ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಬಿ.ಜಿ. ಸಿದ್ಧಲಿಂಗಮ್ಮ  ಅವರು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಈ ವೇಳೆ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವ ಜೊತೆಗೆ ನಿರ್ದಿಷ್ಟ ಗುರಿ ಮತ್ತು ಛಲವನ್ನು ಹೊಂದಬೇಕೆಂದು ಕರೆ ನೀಡಿದರು. 

ನಿಜವಾದ ಜ್ಞಾನ ಶಿಸ್ತನ್ನು ಬೆಳೆಸುತ್ತದೆ. ವಿದ್ಯೆ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಮಯ ಪ್ರಜ್ಞೆ, ಗುರಿ, ಪರಿಶ್ರಮ ಇದ್ದಲ್ಲಿ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಪಾಲಾಕ್ಷಿ ಅವರು, ಪ್ರತಿಭಾವಂತರು ಸಮಾಜ ಮುಖಿಯಾದಾಗ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ, ಗುರಿ ಅತಿ ಮುಖ್ಯ ಎಂದರು.

ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ಕೆ. ಶಿವಶಂಕರ್, ಉಪಾಧ್ಯಕ್ಷ ರೇವಣಸಿದ್ಧಪ್ಪ ಅಂಗಡಿ, ನಿರ್ದೇಶಕರಾದ ಎಂ. ಸಿದ್ದೇಶ್, ಎನ್.ಓಹಿಲೇಶ್ವರ, ಕೆ. ಅರುಣ್, ಬಿ.ಯು. ಕುಬೇರಪ್ಪ, ಕೆ.ಆರ್. ಸಿದ್ಧಲಿಂಗೇಶ್, ಹೆಚ್.ಕೆ. ಕಲ್ಲೇಶ್, ಆರ್.ಸಿ. ಅನಸೂಯಮ್ಮ, ಬಿ.ಬಿ. ವಿಶಾಲಾಕ್ಷಮ್ಮ, ಟಿ.ಜಿ. ಶಿಲ್ಪಾ, ಎನ್.ಎಸ್. ಮಲ್ಲಿಕಾರ್ಜುನಪ್ಪ,  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿರೇಶ್ ಎಸ್. ಒಡೇನಪುರ, ಕೃಷಿ ಇಲಾಖೆ ಅಧಿಕಾರಿಗಳಾದ ರೇವಣಸಿದ್ಧನಗೌಡ, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಂ. ಗೌರಿ ಅವರ ಭರತ ನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಬಿ.ಟಿ. ಪ್ರಕಾಶ್ ವಚನ ಗೀತೆ ಹಾಡಿದರು. ರೇವಣಸಿದ್ಧಪ್ಪ ಅಂಗಡಿ ಸ್ವಾಗತಿಸಿದರು. 

error: Content is protected !!