ಉನ್ನತ ಶಿಕ್ಷಣದ ಮೂಲಕ ಸಮರ್ಥ ಜೀವನ ರೂಪಿಸಿಕೊಳ್ಳಿ

ಉನ್ನತ ಶಿಕ್ಷಣದ ಮೂಲಕ ಸಮರ್ಥ ಜೀವನ ರೂಪಿಸಿಕೊಳ್ಳಿ

ದಾವಣಗೆರೆ ವಿವಿಯಲ್ಲಿನ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಡಾ. ಪ್ರಭಾ ವಿದ್ಯಾರ್ಥಿಗಳಿಗೆ ಕಿವಿಮಾತು

ದಾವಣಗೆರೆ, ಜೂ.16- ಭಾರತವನ್ನು 21ನೇ ಶತಮಾನದಲ್ಲಿ ಮುನ್ನಡೆಸಲು ಯುವಕರು ಶಕ್ತಿ ಕೇಂದ್ರವಾಗಿದ್ದು, ಉನ್ನತ ಶಿಕ್ಷಣದ ಮೂಲಕ ಸಮರ್ಥ ಜೀವನ ರೂಪಿಸಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಬೆಂಗಳೂರು) ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದ ವತಿಯಿಂದ ಶನಿವಾರ ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿ ಆಯೋಜಿಸಲಾದ  ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಮಟ್ಟದ ಯುವಜನೋತ್ಸವ – 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎಂಬುದು ಕೇವಲ ಪಠ್ಯದ ಕಲಿಕೆಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲಾ ಹಂತಗಳ ಪರಿಚಯಕ್ಕೆ ಶಿಕ್ಷಣ ಅಗತ್ಯವಾಗಿದೆ. ಕಲಿಕೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ತಿಳಿಸುವ ಮೌಲ್ಯಯುತ ಶಿಕ್ಷಣದ ಅನಿವಾರ್ಯತೆ ಪ್ರಸ್ತುತವಿದೆ. ವಿದ್ಯಾರ್ಥಿಗಳ ಜೀವನ ಬಿಳಿ ಹಾಳೆಯಂತೆ, ಉತ್ಕೃಷ್ಟ, ಆದರ್ಶ, ಮಾದರಿ ವಿಷಯಗಳನ್ನು ಬರೆದುಕೊಂಡು ಸಮರ್ಥ ಜೀವನ ರೂಪಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ದೃಢತೆಗೆ ಸಹಕಾರಿಯಾಗಲಿದೆ. ಇಂದಿನ ಶಾಲಾ – ಕಾಲೇಜುಗಳಲ್ಲಿ ಕ್ರೀಡಾಂಗಣಕ್ಕೆ ಮಕ್ಕಳನ್ನು ಕಳಿಸುವುದು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಮಾತನಾಡಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾನಿಲಯ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವಿರುವುದು ಹೆಮ್ಮೆಯ ವಿಷಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸ್ಕೌಟ್‌ ಮತ್ತು ಗೈಡ್ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. 

ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿ ಧ್ಯೇಯವನ್ನು ಸಮರ್ಥವಾಗಿ ನಿರ್ವಹಿಸಬೇಕು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಇನ್ನೊಬ್ಬರ ಹಿತವನ್ನು ಬಯಸುವ, ಸಂಕಷ್ಟಕ್ಕೆ ನೆರವಾಗುವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಒಳಗೊಂಡ ಮೌಲ್ಯಾಧಾರಿತ ಜೀವನವು ಸಾರ್ಥಕತೆ ಪಡೆಯುತ್ತದೆ. ವಿದ್ಯಾರ್ಥಿಗಳು ಶಿಬಿರದ ಮೂಲಕ ಸೌಹಾರ್ದಯುತ ಜೀವನವನ್ನು ಕಲಿಯುವ ಜೊತೆಗೆ ಸಮಾಜದ ವಿವಿಧ ಸ್ತರಗಳಲ್ಲಿರುವ ಜನರ ಜೀವನ ಮಟ್ಟ, ಅವರಲ್ಲಿರುವ ವಿಶಿಷ್ಟ ಗುಣಸ್ವಭಾವ, ಸಮಸ್ಯೆ  ಗುರುತಿಸಿ, ಉತ್ತಮವಾದುದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ, ಎನ್‌ಎಸ್‌ಎಸ್ ಪ್ರಾಂತೀಯ ನಿರ್ದೇಶಕ ಡಿ.ಕಾರ್ತಿಕೇಯನ್, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ಎನ್‌ಎಸ್‌ಎಸ್ ಅಧಿಕಾರಿ ಉಪ್ಪಿನ್ ವೈ.ಎಂ, ಕುಲಸಚಿವ (ಪರೀಕ್ಷಾಂಗ) ಡಾ. ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ದಾವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಅಶೋಕ್ ಕುಮಾರ್ ಪಾಳೇದ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!