ಖಾತರಿಯಡಿ ಜಲಸಂರಕ್ಷಣೆ ಕಾಮಗಾರಿಗೆ ಒತ್ತು

ಖಾತರಿಯಡಿ ಜಲಸಂರಕ್ಷಣೆ ಕಾಮಗಾರಿಗೆ ಒತ್ತು

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗಬಾರದು.

– ಗುಂಜನ್ ಕೃಷ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ


ದಾವಣಗೆರೆ, ಜೂ. 14 – ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ ನೀಡಿದರು. 

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಸಿಗಬೇಕು, ಇದರಿಂದ ಉತ್ತಮ ಇಳುವರು ಪಡೆಯಲು ಸಾಧ್ಯವಾಗಲಿದೆ. ಪೂರ್ವ ಮುಂಗಾರಿನಲ್ಲಿ ಕಡಿಮೆ ದಿನಗಳಲ್ಲಿ ಬರುವ ತರಕಾರಿ ಬೆಳೆಯಲು ಪ್ರೋತ್ಸಾಹಿಸಿ, ಜೊತೆಗೆ ದ್ವಿದಳ ಧಾನ್ಯ ಬೆಳೆಯಲು ಹೆಚ್ಚಿನ ಒತ್ತನ್ನು ನೀಡಬೇಕೆಂದರು. ಖಾತರಿಯಡಿ ಹೂ, ತರಕಾರಿ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದೀರ್ಘಕಾಲೀನ ಹಾಗೂ ವಿಶೇಷವಾದ ಹಣ್ಣು, ತರಕಾರಿಗಳ ಬೆಳೆಗೆ ಒತ್ತು ನೀಡಬೇಕೆಂದು ಸೂಚನೆ ನೀಡಿದರು. 

ಸಾವಯವ ತರಕಾರಿ ಬೆಳೆಗೆ ಪ್ರೋತ್ಸಾಹಿಸಿ; ಜನರು ಆರೋಗ್ಯ ದೃಷ್ಟಿಯಿಂದ ಸಾವಯವ ಕೃಷಿಯಿಂದ ಮಾಡಲಾದ ಹಣ್ಣು, ತರಕಾರಿ, ಸೊಪ್ಪುಗಳನ್ನು ಬಳಸಲು ಇಷ್ಟಡುತ್ತಾರೆ. ಅದಕ್ಕಾಗಿ ಸಾವಯವ ಕೃಷಿಯಿಂದ ಬೆಳೆಯುವ ತೋಟ ಗಾರಿಕೆ, ಕೃಷಿಗೆ ಒತ್ತು ನೀಡಬೇಕು. ಸಾವಯವ ಮೂಲಕ ಬೆಳೆದ ಹಣ್ಣು, ತರಕಾರಿಗಳಿಗೆ ಗುಣ ಮಟ್ಟದ ದೃಢೀಕರಣದೊಂದಿಗೆ ಪ್ರಮಾಣಿಕರಿಸಿ ಮಾರುಕಟ್ಟೆ ಕಲ್ಪಿಸಿದಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ರೈತರಿಗೆ ಇದರಿಂದ ಹೆಚ್ಚಿನ ಆದಾಯ ಬರುವಂತಾಗುತ್ತದೆ ಎಂದು ತೋಟಗಾರಿಕೆ, ಕೃಷಿ ಅಧಿಕಾರಿಗಳಿಗೆ ತಿಳಿಸಿದರು. 

ಜಲಾನಯನ ಕಾಮಗಾರಿಗೆ ಒತ್ತು; ಖಾತರಿಯಡಿ ಜಲಸಂರಕ್ಷಣೆಗಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಚೆಕ್ ಡ್ಯಾಂ, ಇಂಗುಗುಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ, ಇಂಗುವಂತೆ ನೋಡಿಕೊಂಡಲ್ಲಿ ಬೇಸಿಗೆ ಎದುರಿಸಲು ಸಾಧ್ಯವಾಗಲಿದೆ ಎಂದರು. 

 ಈ ವೇಳೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅವರು ಜಿಲ್ಲೆಯಲ್ಲಿ ಉಪಚಾರವಾಗದ 60 ಸಾವಿರ ಹೆಕ್ಟೇರ್ ಭೂಮಿ ಇದ್ದು ಈಗಾಗಲೇ 1.80 ಲಕ್ಷ ಹೆಕ್ಟೇರ್ ಉಪಚಾರವಾದ ಜಲಾನಯನ ಪ್ರದೇಶ ಜಿಲ್ಲೆಯಲ್ಲಿದೆ. ಖಾತರಿಯಡಿ ಇಂತಹ ಪ್ರದೇಶದಲ್ಲಿ ಈ ವರ್ಷ ಜಲಸಂರಕ್ಷಣಾ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದರು. 

ಮಳೆ ನೀರು ಕೊಯ್ಲು ; ಜಿಲ್ಲೆಯ ನಗರ, ಪಟ್ಟಣ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ನೀಡುವ ಪರವಾನಗಿ ವೇಳೆ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಮಾಡಿಕೊಳ್ಳುವ ಷರತ್ತಿನೊಂದಿಗೆ ಅನುಮತಿ ನೀಡಬೇಕು. ಏಕೆಂದರೆ ಬೇಸಿಗೆಯಲ್ಲಿ ಈ ವರ್ಷ ನೀರಿನ ಸಮಸ್ಯೆ ಎದುರಿಸುವಂತಾಯಿತು. ಮಳೆ ನೀರು ಕೊಯ್ಲು ಮಾಡುವುದರಿಂದ ಬೇಸಿಗೆಯಲ್ಲಿ ಇದರ ಉಪಯೋಗವಾಗುವುದರಿಂದ ನೀರಿನ ಸಂಗ್ರಹವಾಗಿ ಜನರಿಗೆ ಉಪಯೋಗವಾಗಲಿದೆ ಎಂದರು.  

ಕುಡಿಯುವ ನೀರು ಪರೀಕ್ಷೆ ಮಾಡಲು ಸೂಚನೆ; ಕಲುಷಿತ ಕುಡಿಯುವ ನೀರಿನ ಪೂರೈಕೆಯಿಂದ ಸಾಮೂಹಿಕವಾಗಿ ಅನಾರೋಗ್ಯದ ವರದಿಯು ರಾಜ್ಯದಲ್ಲಿ ಅಲ್ಲಲ್ಲಿ ಕಂಡು ಬಂದಿದ್ದು ಕುಡಿಯುವ ನೀರು ಪೂರೈಕೆ ಮಾಡುವ ಮೊದಲು ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ನೀರಿನ ಮೂಲ, ಪೈಪ್‍ಲೈನ್, ಟ್ಯಾಂಕ್‍ಗಳಲ್ಲಿ ನೀರನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿದ ನಂತರವೇ ಪೂರೈಕೆ ಮಾಡಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಿರಿಯ ಇಂಜಿನಿಯರ್‍ಗಳು ನೀರಿನ ಪರೀಕ್ಷೆ ನಡೆಸಿ ಪೂರೈಕೆ ಮಾಡಬೇಕು. ನೀರಿನ ಪೂರೈಕೆಯಲ್ಲಿ ಕಲುಷಿತ ನೀರು ಪೂರೈಕೆಯಾದಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದ ಅವರು ಕುಡಿಯುವ ನೀರಿನ ಪೈಪ್‍ಲೈನ್ ಚರಂಡಿ ದಾಟಿ ಹೋಗುವಂತಿದ್ದಲ್ಲಿ ಪರಿಶೀಲನೆ ಮಾಡಿ ಬೇರೆಡೆ ಸ್ಥಳಾಂತರಿಸಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಚರಂಡಿಯೊಂದಿಗೆ ಕುಡಿಯುವ ನೀರಿನ ಪೈಪ್‍ಲೈನ್ ಇರಬಾರದು ಎಂದು ತಿಳಿಸಿದರು. 

ಶುದ್ದ ಕುಡಿಯುವ ನೀರು ಒದಗಿಸಿ; ಜಿಲ್ಲೆಯಲ್ಲಿ 799 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 761 ಕಾರ್ಯ ನಿರ್ವಹಿಸುತ್ತಿವೆ. 34 ಘಟಕಗಳಿಗೆ ನೀರಿನ ಪೂರೈಕೆ ಇಲ್ಲದ ಕಾರಣ ಮತ್ತು 4 ಇತರೆ ಕಾರಣಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದಾಗ ಎಲ್ಲೆಲ್ಲಿ ಕುಡಿಯುವ ನೀರು ಯೋಗ್ಯವಲ್ಲ ಎಂದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆಯೋ ಅಲ್ಲಿನ ಜನರು ಶುದ್ದ ಕುಡಿಯುವ ನೀರಿನ ಘಟಕದಿಂದ ಪಡೆದ ನೀರನ್ನೇ ಕುಡಿಯಲು ಜಾಗೃತಿ ಮೂಡಿಸಬೇಕೆಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು. 

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯವ ನೀರಿನ ಕಾಮಗಾರಿ; ಕಳೆದ ಬೇಸಿಗೆ ಸಂದರ್ಭದಲ್ಲಿ ಅಲ್ಲಿನ ಕೊಳವೆ ಬಾವಿಗಳು ವಿಫಲವಾಗಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಿದ ಮತ್ತು ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಿದ ಗ್ರಾಮಗಳಲ್ಲಿ ಆದ್ಯತೆಯೊಂದಿಗೆ ಹೊಸ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

ಖಾತರಿಯಲ್ಲಿ 35 ಲಕ್ಷ ಮಾನವ ದಿನಗಳ ಗುರಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ಪ್ರಸಕ್ತ ವರ್ಷ 215.80 ಕೋಟಿ ಕಾರ್ಮಿಕ ಆಯವ್ಯಯ ಅಂದಾಜಿಸಲಾಗಿದ್ದು, 35 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 6.13 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ರೂ.20.11 ಕೋಟಿ ಕೂಲಿ ಬಾಬ್ತು, ರೂ. 10.35 ಕೋಟಿ ಸಾಮಗ್ರಿ ಬಾಬ್ತು ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

                                    

error: Content is protected !!