ದಾವಣಗೆರೆ, ಜೂ. 14 – ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನಕ್ಕೆ ಮುಂದಾಗುವುದಕ್ಕೆ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಕ್ಷೇಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರೋ ಹೆಣ್ಣು ಮಗಳು ದೂರು ಕೊಟ್ಟ ಮಾತ್ರಕ್ಕೆ ಬಂಧನ ಅಂದರೆ ಹೇಗೆ? ಅದಕ್ಕೆ ಅರ್ಥ ಇದೆಯೇ? ಎಂದು ಪ್ರಶ್ನಿಸಿದರು.
ಯಾರೋ ದಾರಿಯಲ್ಲಿ ಹೋಗೋರು ದೂರು ಕೊಟ್ಟರೆ ಬಂಧನ ಎಂದರೆ ಏನರ್ಥ. ಮಹಿಳೆ 55 ಜನರ ವಿರುದ್ಧವೂ ದೂರು ನೀಡಿದ್ದಾರೆ. ಇಂತಹದಕ್ಕೆ ಬೆಲೆ ಇದೆಯೇ? ಎಂದವರು ಕೇಳಿದ್ದಾರೆ.
ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಶಂಕರಪ್ಪ, ದರ್ಶನ್ ಮಾಡಿದ್ದು ತಪ್ಪು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದರು.
ದರ್ಶನ್ ಮೇಲೆ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದೂ ಅವರು ಹೇಳಿದರು.