ಹಳೇಭಾಗದ ನಾಗರಿಕರಿಗಾಗಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ

ಹಳೇಭಾಗದ ನಾಗರಿಕರಿಗಾಗಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ

ಕೆ.ಆರ್. ರಸ್ತೆಯ ಎಸ್.ಎಸ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೆ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿಯೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಜೂ. 14- ನಗರದ ಕೆ.ಆರ್. ರಸ್ತೆಯಲ್ಲಿ ಹಳೇ ಭಾಗದ ಸಾರ್ವಜನಿಕರ ಹಿತದೃಷ್ಠಿಯಿಂದ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಕೆ.ಆರ್. ರಸ್ತೆಯಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಎಸ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಮತ್ತೆ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿರುವುದನ್ನು ಮನಗಂಡು ಇಲ್ಲಿ ಸಾರ್ವಜನಿಕ ಆಸ್ಪತ್ರೆ ತರೆದು ಉಚಿತ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಬೇಡಿಕೆಗಳಿಗೆ ಅನುಗುಣವಾಗಿ ಇದೀಗ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ.  ಒಟ್ಟು ಹದಿನಾರು ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಈ ಆಸ್ಪತ್ರೆಯ ಹಿಂಭಾಗದ ಜಾಗವನ್ನು ಬಾಪೂಜಿ ಸಂಸ್ಥೆ ಖರೀದಿಸಿದ್ದು, ಇಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಶೀಘ್ರದಲ್ಲೇ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸುವುದಾಗಿ ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದು, ಇದನ್ನು ಅರಿತ ಎಸ್‌.ಎಸ್. ಕೇರ್ ಟ್ರಸ್ಟ್ ಈ ಭಾಗದ ಜನತೆಗೆ ಉತ್ತಮ ಆರೋಗ್ಯವನ್ನು ಕಲ್ಪಿಸುವ ಸದುದ್ದೇಶದಿಂದ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದರು.

ಬೇರೆ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ 1200 ರಿಂದ 2000 ರೂ. ತೆಗೆದುಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಡಯಾಲಿಸಿಸ್‌ಗೆ ಅವಕಾಶ ನೀಡಲಾಗಿದೆ. 

ವೈದ್ಯರೂ ಸಹ ಯಾರೇ ಬಂದರೂ ಶಿಫಾರಸ್ಸು, ಮತ್ತಿತರೆ ಪತ್ರಗಳನ್ನು ಕೇಳದೇ ಮತ್ತು ಅಲೆದಾಡಿಸದೇ ಚಿಕಿತ್ಸೆ ನೀಡಬೇಕು. ಸಾವಿನ ದವಡೆಯಲ್ಲಿರುವ ಜನರ ಪ್ರಾಣ ರಕ್ಷಣೆ ಹೊಣೆ ವೈದ್ಯರದು ಎಂದು ಹೇಳಿದರು.

ನೂತನ ಸಂಸದರೂ, ಎಸ್‌.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿಯೂ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, 2019 ರಲ್ಲಿ ಕೇವಲ ನಾಲ್ಕು ಡಯಾಲಿಸಿಸ್ ಯಂತ್ರಗಳಿಂದ ಚಿಕಿತ್ಸೆ ಆರಂಭಿಸಲಾಗಿತ್ತು. ಇದೀಗ 16 ಯಂತ್ರಗಳನ್ನು ಹೊಂದಿದೆ. ಇದುವರೆಗೂ 16 ಸಾವಿರ ಜನರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗಿದೆ. ಪ್ರತಿ ತಿಂಗಳು 500 ಜನರು ಡಯಾಲಿಸಿಸ್ ಗೆ ಒಳಗಾಗುತ್ತಿದ್ದಾರೆ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಮತ್ತು ಅರಸಾಪುರ ಗ್ರಾಮಗಳನ್ನು `ಹೆಲ್ತ್ ಆನ್ ವೀಲ್’ ಆರೋಗ್ಯ ಯೋಜನೆಯಡಿ ದತ್ತು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಎಸ್.ಎಸ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಯನ್ನು ಸಮರ್ಪಕವಾಗಿ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಇರುವವರಿಗೆ ಉಚಿತ ಚಿಕಿತ್ಸೆ ಕೊಡಲಾಗುವುದು. ಆರಂಭಿಕ ಹಂತದಲ್ಲಿಯೇ ಕಿಡ್ನಿ ಸಮಸ್ಯೆ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಪಾಲಿಕೆ ಸದಸ್ಯರು, ಮುಖಂಡರು ತಮ್ಮ ಭಾಗದ ಜನರು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಆರೋಗ್ಯ ಶಿಬಿರಗಳಿಗೆ ಕರೆತಂದು ತಪಾಸಣೆ, ಚಿಕಿತ್ಸೆ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಗರ್ಭಿಣಿಯರು, ಬಾಣಂತಿಯರಿಗೆ ಉಚಿತ ತಪಾಸಣೆ, ಕ್ಯಾನ್ಸರ್, ನೇತ್ರ, ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಾ ಬರಲಾಗಿದೆ. ಎಸ್ಸೆಸ್ ಅವರ ಆಶೀರ್ವಾದ, ಎಸ್ಸೆಸ್ಸೆಂ ಅವರ ಮಾರ್ಗದರ್ಶನದಲ್ಲಿ ಮೊಬೈಲ್ ಕ್ಲಿನಿಕ್ ವಾಹನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಗ್ರಾಮಗಳಿಗೆ ತೆರಳಿ ಉಚಿತ ಆರೋಗ್ಯ ಸೇವೆ ಮಾಡಲಾಗುತ್ತಿದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶುಕ್ಲಶೆಟ್ಟಿ, ಬಾಪೂಜಿ ಆಸ್ಪತ್ರೆ ಆಡಳಿತಾಧಿಕಾರಿ ಸತ್ಯನಾರಾಯಣ,    ನಿರಂಜನ್, ಸಂಪನ್ನ ಮುತಾಲಿಕ್,   ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಚಮನ್ ಸಾಬ್, ಅಯೂಬ್ ಮತ್ತಿತರರಿದ್ದರು. ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!