ರೈತರಿಗೆ `ಪಿಂಚಣಿ’ ನೀಡುವ ಮಿಶ್ರ ಹಣ್ಣಿನ ತಾಕು

ರೈತರಿಗೆ `ಪಿಂಚಣಿ’ ನೀಡುವ ಮಿಶ್ರ ಹಣ್ಣಿನ ತಾಕು

ಒಂದು ಎಕರೆ ಮಾಡೆಲ್ ಆಗಿ ಮಿಶ್ರ ಹಣ್ಣಿನ ತಾಕು ಮಾಡಿದ್ದೇವೆ. ಉಳುಮೆ ರಹಿತ, ನೈಸರ್ಗಿಕ ಪದ್ಧತಿಯಲ್ಲಿ 30ಕ್ಕೂ ಹೆಚ್ಚು ಜಾತಿಯ 140 ಗಿಡಗಳನ್ನು ಬೆಳೆದಿದ್ದೇವೆ

– ಡಾ. ಟಿ.ಎನ್. ದೇವರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿದೆ ಮಾದರಿ

ದಾವಣಗೆರೆ, ಜೂ. 12 – ಉದ್ಯೋಗಸ್ಥರಿಗೆ ಪಿಂಚಣಿಯ ಸೌಲಭ್ಯ ಇದೆ. ಅದೇ ರೀತಿ ರೈತರ ಜಮೀನೂ ಸಹ ಪಿಂಚಣಿ ಕೊಡಲು ಸಾಧ್ಯವೇ? ಅಂತಹ ಒಂದು ಪ್ರಯೋಗ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದಿದ್ದು, ಯಶಸ್ಸಿನ ಹಾದಿ ದೊರೆತಿದೆ.

ಈ ಬಗ್ಗೆ ಮಾತನಾಡಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್, ಒಂದು ಎಕರೆ ಮಾಡೆಲ್ ಆಗಿ ಮಿಶ್ರ ಹಣ್ಣಿನ ತಾಕು ಮಾಡಿದ್ದೇವೆ. ಉಳುಮೆ ರಹಿತ, ನೈಸರ್ಗಿಕ ಪದ್ಧತಿಯಲ್ಲಿ 30ಕ್ಕೂ ಹೆಚ್ಚು ಜಾತಿಯ 140 ಗಿಡಗಳನ್ನು ಬೆಳೆದಿದ್ದೇವೆ ಎಂದು ಹೇಳಿದರು.

ರೈತರು ಇಳಿ ವಯಸ್ಸಿನಲ್ಲಿ ಹೆಚ್ಚು ಕಷ್ಟ ಪಡದೇ ಒಂದು ಕುಟುಂಬಕ್ಕೆ ಅಗತ್ಯವಾಗುವಷ್ಟು ಆಹಾರ ಹಾಗೂ ಆದಾಯ ಪಡೆಯಲು ಸಾಧ್ಯವಾಗುವುದೇ? ಎಂಬ ಪ್ರಶ್ನೆಯೊಂದಿಗೆ ಈ ಮಿಶ್ರ ಹಣ್ಣಿನ ತಾಕು ಪ್ರಾತ್ಯಕ್ಷಿಕೆ ಮಾಡಿದ್ದೆವು. ಅಂತಹ ಆದಾಯ ಸಾಧ್ಯ ಎಂಬ ವಿಶ್ವಾಸ ದಿನೇ ದಿನೇ ಹೆಚ್ಚುತ್ತಿದೆ ಎಂದವರು ತಿಳಿಸಿದರು.

ಈ ಮಿಶ್ರ ಹಣ್ಣಿನ ತಾಕಿನಲ್ಲಿ ಕಿರು ಹಣ್ಣು ಪ್ರಭೇದಗಳೇ ಹೆಚ್ಚಾಗಿವೆ. ಹಲಸು ಹಾಗೂ ಮಾವಿನಂತಹ ಹಿರಿ ಹಣ್ಣುಗಳೂ ಇವೆ. ವಾಟರ್ ಆಪಲ್, ರೋಸ್ ಆಪಲ್, ಬೇಲ, ಆಮ್ಲ, ನೆಲ್ಲಿ, ಅಮಟೆಕಾಯಿ, ಬೇರೆ ಬೇರೆ ಜಾತಿಯ ನಿಂಬೆ, ಕಿತ್ತಳೆ, ಮೋಸಂಬಿ, ಚಕ್ಕೋತ, ಸೀಬೆ, ನೇರಳೆ, ಸೀಡ್‌ಲೆಸ್ ನೆರಳೆ, ಮರ ಅಂಜೂರ, ಸೀತಾ ಫಲ, ರಾಮ ಫಲ ಇತ್ಯಾದಿಗಳನ್ನು ಬೆಳೆದಿದ್ದೇವೆ ಎಂದು ದೇವರಾಜ್ ಹೇಳಿದರು.

ಯಾವುದೇ ಹಣ್ಣು ಸಿಹಿ ಹಾಗೂ ಪೋಷಕಾಂಶ  ಕೊಡುವ ಜೊತೆಗೆ ಒಂದು ರೀತಿಯ ಔಷಧಿಯಾಗಿಯೂ ಕೆಲಸ ಮಾಡುತ್ತವೆ ಎಂದವರು ತಿಳಿಸಿದರು.

ಒಂದು ಎಕರೆ ಪ್ರದೇಶದಲ್ಲೂ ಕೂಡ ಬದುಕಿಗೆ ಬೇಕಾಗುವ ಹಣ್ಣು ಬೆಳೆಯುತ್ತಾ, ಅಂತರದ ಜಾಗದಲ್ಲಿ ಬೇಕಾಗಿರುವ ದವಸ ಧಾನ್ಯಗಳನ್ನೂ ಬೆಳೆಯಬಹುದು. ಸೊಪ್ಪು ಬೆಳೆಯಬಹುದು. ಕುಟುಂಬದ ಆಹಾರ ನಿರ್ವಹಣೆಗೆ ಬೇಕಾದ ಎಲ್ಲವನ್ನೂ ಬೆಳೆಯಬಹುದು ಎಂದು ಹೇಳಿದರು.

ಜೇನುಗಳು ಹಣ್ಣಿನ ಇಳುವರಿ ಹೆಚ್ಚಿಸಲು ನೆರವಾಗುತ್ತವೆ. ಹೀಗಾಗಿ ಈ ತಾಕಿನಲ್ಲಿ ಜೇನು ಹುಳುಗಳನ್ನು ಸಾಕುವ ಮಧು ಕುಟೀರ ಸಹ ರೂಪಿಸಿದ್ದೇವೆ. ಇಲ್ಲಿ ಜೇನಿನ ಪೆಟ್ಟಿಗೆಗಳನ್ನು ಇಟ್ಟಿದ್ದೇವೆ. ಜೇನು ಸಾಕಲು ಅಗತ್ಯ ಪರಿಕರಗಳನ್ನೂ ಪ್ರದರ್ಶನಕ್ಕೆ ಇಟ್ಟಿದ್ದೇವೆ ಎಂದವರು ಹೇಳಿದರು.

ಒಂದು ಎಕರೆಯಲ್ಲಿ ಹಣ್ಣಿನ ತಾಕು ರೂಪಿಸಿದಾಗಲೂ, ಕುಟುಂಬ ನಿರ್ವಹಣೆಗೆ ಅಗತ್ಯ ಆದಾಯ ಪಡೆಯಲು ಸಾಧ್ಯ. ಆದಾಯದ ಜೊತೆಗೆ ಆನಂದ ಮತ್ತು ಆರೋಗ್ಯ ಗಳಿಸಲು ಸಾಧ್ಯ ಇದೆ ಎಂಬ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಖುಷಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ನಂಬಿಕೆ ಗಟ್ಟಿಯಾಗುತ್ತಿದೆ ಎಂದು ದೇವರಾಜ್ ಹೇಳಿದರು.

error: Content is protected !!