ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ
ದಾವಣಗೆರೆ, ಜೂ. 12 – ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್.ಎಸ್.ಎಸ್.ಒ.) ವರದಿಯ ಪ್ರಕಾರ ದೇಶದಲ್ಲಿ 49 ಲಕ್ಷ ಬಾಲ ಕಾರ್ಮಿಕರಿದ್ದಾರೆ. ಬಾಲಕಾರ್ಮಿಕ ಪದ್ಧತಿಯು ಸಮಾಜಕ್ಕೆ ಅಂಟಿದ ಶಾಪ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಸ್.ಪಿ.ಎಸ್. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ನಗರದಲ್ಲಿ ಮಂಡಕ್ಕಿ ಭಟ್ಟಿ, ಕ್ರಶರ್, ಗ್ಯಾರೇಜ್ ಮುಂತಾದ ಕಡೆಗಳಲ್ಲಿ ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ಬಾಲ ಕಾರ್ಮಿಕ ಪದ್ಧತಿಯು ಸಮಾಜಕ್ಕೆ ಅಂಟಿಕೊಂಡಿರುವ ಶಾಪ. ಈ ಪಿಡುಗು ನಿವಾರಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ನೂರು – ಇನ್ನೂರು ಗರ್ಭಿಣಿಯರಲ್ಲಿ ಒಬ್ಬರು ಅಪ್ರಾಪ್ತೆಯಾಗಿರುವುದು ಕಳವಳಕಾರಿ ಎಂದೂ ಅವರು ಹೇಳಿದರು.
ಮಕ್ಕಳ ಬೌದ್ಧಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸಮತೋಲನದ ಬೆಳವಣಿಗೆ ಅಗತ್ಯವಾಗಿದೆ. ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳಿಗೆ ಈ ಬೆಳವಣಿಗೆ ಸಿಗುವುದಿಲ್ಲ. ಮಕ್ಕಳು ಸ್ವಾತಂತ್ರ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಾರೆ. ಜೀವನದಲ್ಲಿ ಸಾಧನೆ ಮಾಡುವುದು ಕಷ್ಟವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳ ಭವಿಷ್ಯ ಕಿತ್ತುಕೊಂಡಂತಾಗುತ್ತದೆ. ಮಕ್ಕಳ ಸಾಧನೆಯ ಅವಕಾಶ ತಪ್ಪಿಸಿದಂತಾಗುತ್ತದೆ ಎಂದರು.
ಬಾಲ್ಯ ವಿವಾಹ ಜೀತಕ್ಕಿಂತ ಕಷ್ಟ
ಬಾಲಕರು ಬಾಲಕಾರ್ಮಿಕ ಪದ್ಧತಿಗೆ ಗುರಿಯಾದಾಗ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ. ಆದರೆ, ಬಾಲಕಿಯರು ಬಾಲ್ಯ ವಿವಾಹಕ್ಕೆ ಗುರಿಯಾದಾಗ ಇದಕ್ಕಿಂತ ಹೆಚ್ಚು ಕಷ್ಟ ಅನುಭವಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಹೇಳಿದರು.
ಬಾಲ್ಯ ವಿವಾಹಕ್ಕೆ ಗುರಿಯಾಗುವ ಬಾಲಕಿಯರು ದೈಹಿಕ ಹಾಗೂ ಮಾನಸಿಕ ದೌರ್ಜನ್ಯದ ಜೊತೆಗೆ ಲೈಂಗಿಕ ದೌರ್ಜನ್ಯಕ್ಕೂ ಗುರಿಯಾಗುತ್ತಾರೆ. ಬಾಲ ಕಾರ್ಮಿಕ ಪದ್ಧತಿಯಲ್ಲಿ ದುಡಿಮೆಯ ಹಣವಾದರೂ ಸಿಗುತ್ತದೆ. ಬಾಲ್ಯ ವಿವಾಹಕ್ಕೆ ಗುರಿಯಾದವರಿಗೆ ದುಡಿಮೆಯೂ ಇರುವುದಿಲ್ಲ. ಜೀತದಾಳುಗಳಿಗಿಂತ ಕಷ್ಟದ ಪರಿಸ್ಥಿತಿ ಇರುತ್ತದೆ ಎಂದವರು ಹೇಳಿದರು.
ಜಿಲ್ಲಾ ಪಂಚಾಯ್ತಿ ಹೆಚ್ಚುವರಿ ಕಾರ್ಯದರ್ಶಿ ಕೃಷ್ಣಾ ನಾಯ್ಕ ಮಾತನಾಡಿ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲೂ ಸಮೀಕ್ಷೆಗಳನ್ನು ನಡೆಸಿ ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಣೆ ನೀಡಬೇಕಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಶಿಕ್ಷಣ ಸಂವಿಧಾನದಿಂದ ದೊರೆತಿರುವ ಹಕ್ಕು. ಈ ಹಕ್ಕಿನ ರಕ್ಷಣೆ ಸರ್ಕಾರದ ಜೊತೆಗೆ ಜನರ ಹೊಣೆಯೂ ಆಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ್ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಡ ಕುಟುಂಬಗಳಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಪರಿಶಿಷ್ಟ ಮಕ್ಕಳು ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಿಡಿಪಿಐ ಜಿ. ಕೊಟ್ರೇಶ್ ಬಾಲಕಾರ್ಮಿಕ ಪದ್ಧತಿ ತಡೆಯುವ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್. ವೀಣಾ, ದಾವಣಗೆರೆ ಉತ್ತರ ಬಿಇಒ ಶೇರ್ ಅಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, ಜಿಲ್ಲಾ ಕಾರ್ಮಿಕ ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಇ.ಎನ್. ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.