ಆಗ್ನೇಯ ಶಿಕ್ಷಕರ ಕ್ಷೇತ್ರ ಶೇ.92.93 ಮತದಾನ

ಆಗ್ನೇಯ ಶಿಕ್ಷಕರ ಕ್ಷೇತ್ರ ಶೇ.92.93 ಮತದಾನ

ದಾವಣಗೆರೆ, ಜೂ.3- ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ, ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಮತದಾನ ಶಾಂತಯುತವಾಗಿ ನಡೆದಿದೆ.

ಜಿಲ್ಲೆಯಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶೇ.92.93ರಷ್ಟು ಮತದಾನವಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ.87.74 ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಶೇ.80.95 ರಷ್ಟು ಮತದಾನವಾಗಿದೆ.

ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತಾದರೂ, ಬೆಳಿಗ್ಗೆಯೇ ಚುರುಕು ಪಡೆದಿತ್ತು. ಶಿಕ್ಷಕರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕೆಲವು ಖಾಸಗಿ ಶಾಲೆಗಳಿಗೆ ಚುನಾವಣೆ ಅಂಗವಾಗಿ ರಜೆ ಘೋಷಿಸಲಾಗಿತ್ತು. ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಶಿಕ್ಷಕರು ಮತದಾನ ಮಾಡಿ ಲಗುಬಗೆಯಿಂದ ಕರ್ತವ್ಯಕ್ಕೆ ದೌಡಾಯಿಸುತ್ತಿದ್ದರು. 

ನಗರದ ಹೈಸ್ಕೂಲ್ ಮೈದಾನ ಸೇರಿದಂತೆ, ಮತ ಕೇಂದ್ರಗಳ ಬಳಿ ರಾಜಕೀಯ ಪಕ್ಷದ ಮುಖಂಡರು ತಮ್ಮ ಪರವಾದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದರು.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕು ಗಳಲ್ಲಿ ಒಟ್ಟು  7 ಮತಗಟ್ಟೆಗಳಿದ್ದು 4351 ಮತದಾರರಿದ್ದರು. ಈ ಪೈಕಿ 2608 ಪುರುಷ ಹಾಗೂ 1446 ಮಹಿಳೆಯರು ಸೇರಿ ಒಟ್ಟು 4051 ಮತದಾರರು ಮತ ಚಲಾಯಿಸಿದ್ದಾರೆ. ಇಲ್ಲಿ ಹಕ್ಕು ಚಲಾಯಿಸಿದವರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಯಿತು.

 ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಸೇರಲಿದ್ದು 4 ಮತಗಟ್ಟೆಗಳಿಂದ 979 ಮತದಾರರ ಪೈಕಿ 859 ಜನರು ಮತ ಚಲಾಯಿಸಿದರು. ಇಲ್ಲಿನ ಮತದಾರರಿಗೆ ಬಲಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಯಿತು.

ನೈರುತ್ಯ ಪದವೀಧರರ ಕ್ಷೇತ್ರವು ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳನ್ನು ಒಳಗೊಂಡಿದ್ದು ಒಟ್ಟು 8 ಮತಗಟ್ಟೆಗಳಿಂದ 6558 ಮತದಾರರಿದ್ದರು. ಈ ಪೈಕಿ 5309 ಮತದಾರರು ಚಲಾಯಿಸಿದರು. ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗಿತ್ತು.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಾ.ವೈ.ಎ ನಾರಾಯಣಸ್ವಾಮಿ-ಭಾರತೀಯ ಜನತಾ ಪಾರ್ಟಿ, ಡಿ.ಟಿ.ಶ್ರೀನಿವಾಸ್ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್,  ಕಿಷನ್.ಎಂ.ಜಿ- ಕರ್ನಾಟಕ ರಾಷ್ಟ್ರ ಸಮಿತಿ, ಪಕ್ಷೇತರರಾಗಿ ಡಾ.ಜಿ.ಹೆಚ್.ಇಮ್ರಾಪೂರ, ಕಪನಿಗೌಡ, ಎನ್.ಈ ನಟರಾಜ, ವೈ.ಆರ್.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ, ಬಾಬು ಯೋಗೀಶ್.ಆರ್, ಲೋಕೇಶ್ ತಾಳಿಕಟ್ಟೆ, ವನಿತಾ.ಎಸ್, ವಿನೋದ್ ಶಿವರಾಜ್, ಶ್ರೀನಿವಾಸ.ಬಿ, ಸೈಯದ್ ಆಫಾಖ್ ಅಹಮದ್ ಚುನಾವಣಾ ಕಣದಲ್ಲಿದ್ದರು.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಎಸ್.ಎಲ್.ಭೋಜೆಗೌಡ-ಜನತಾದಳ, ಡಾ.ಕೆ.ಕೆ ಮಂಜುನಾಥ್ ಕುಮಾರ್-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ಡಾ.ಅರುಣ್ ಹೊಸಕೊಪ್ಪ, ಡಾ.ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರ ಶೆಟ್ಟಿ.ಟಿ, ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷೇತರ, ಡಾ.ಎಸ್.ಆರ್.ಹರೀಶ್ ಆಚಾರ್ಯ ಚುನಾವಣಾ ಕಣದಲ್ಲಿದ್ದರು.

ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಆಯನೂರು ಮಂಜುನಾಥ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಡಾ.ಧನಂಜಯ ಸರ್ಜಿ-ಭಾರತೀಯ ಜನತಾ ಪಾರ್ಟಿ, ಜಿ.ಸಿ.ಪಾಟೀಲ್-ಸರ್ವ ಜನತಾ ಪಾರ್ಟಿ ಹಾಗೂ  ಪಕ್ಷೇತರರಾಗಿ ದಿನಕರ ಉಳ್ಳಾಲ್,  ಎಸ್.ಪಿ.ದಿನೇಶ್, ಬಿ.ಮಹಮ್ಮದ್ ತುಂಬೆ, ಕೆ.ರಘುಪತಿ ಭಟ್, ಡಾ.ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ  ಕಣದಲ್ಲಿದ್ದರು.

error: Content is protected !!