ವಿದ್ಯಾರ್ಥಿ ಜೀವನದ ವ್ಯಸನದಿಂದ ಭವಿಷ್ಯ ಹಾಳು

ವಿದ್ಯಾರ್ಥಿ ಜೀವನದ ವ್ಯಸನದಿಂದ ಭವಿಷ್ಯ ಹಾಳು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಮೇ 31 – ವಿದ್ಯಾರ್ಥಿ ಜೀವನದಲ್ಲಿ ತಂಬಾಕು ಇತ್ಯಾದಿ ಮಾದಕಗಳ ವ್ಯಸನಕ್ಕೆ ಸಿಲುಕಿದರೆ ಆರೋಗ್ಯದ ಜೊತೆಗೆ ಜೀವನವೂ ಹಾಳಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪಾಲಿಕೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಕೀಲರ ಸಂಘ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ವಿ.ಎಸ್. ಪ್ಯಾರಾಮೆಡಿಕಲ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ಮಾದಕದ ವ್ಯಸನಕ್ಕೆ ಸಿಲುಕುವ ಅಪಾಯ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳು ಮಾದಕದ ವ್ಯಸನಕ್ಕೆ ಸಿಲುಕಿದರೆ ಮುಂದಿನ ಪೀಳಿಗೆಯ ಗತಿ ಏನಾಗಲಿದೆ? ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಮಾದಕದ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ತಿಳಿಸಿದರು.

ಮಾದಕಗಳಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮಾದಕಗಳು ವ್ಯಸನವಾಗಿ ಮಾರ್ಪಟ್ಟು, ಮಾನಸಿಕ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದವರು ತಿಳಿಸಿದರು.

ವ್ಯಸನಕ್ಕೆ ಸಿಲುಕಿದವರಿಗೆ ನೆರವಾಗಲು ಸಿ.ಜಿ. ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯವಿದೆ. ಮಾದಕ ವ್ಯಸನ ಮುಕ್ತರಾಗಲು ಬಯಸುವವರು ಇಲ್ಲಿ ನೆರವು ಪಡೆಯಬೇಕು ಎಂದವರು ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ.ಕರೆಣ್ಣವರ್ ಮಾತನಾಡಿ, ಜಾಹೀರಾತುಗಳಲ್ಲಿ ತೋರಿಸುವ ವೈಭವೀಕರಣದಿಂದಾಗಿ ಯುವ ಜನತೆ ದಾರಿ ತಪ್ಪುತ್ತಿದೆ. ಈ ಸಮಸ್ಯೆ ನಿವಾರಿಸುವಲ್ಲಿ ಸಾರ್ವಜನಿ ಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಉದ್ದಿಮೆದಾರರ ಕುತಂತ್ರದ ಜಾಹೀರಾತಿನಿಂದ ವೀಕ್ಷಕರು ಉತ್ತೇಜನ ಆಗುತ್ತಿದ್ದಾರೆ. ತಂಪು ಪಾನೀಯಗಳು, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರರು ಜಾಹೀರಾತುಗಳನ್ನು ತೋರಿಸುವುದೇ ಬೇರೆ, ಉತ್ಪನ್ನಗಳು ಇರುವುದು ಬೇರೆ. ಆದರೆ ಇದನ್ನು ತಿಳಿಯದೇ ಯುವ ಪೀಳಿಗೆ ಮಾತ್ರವಲ್ಲದೆ ಮಕ್ಕಳು ಸಹ ಜಾಹೀರಾತಿಗೆ ಮಾರು ಹೋಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾಧಿಕಾರಿ ಡಾ. ಜಿ.ಡಿ. ರಾಘವನ್, ಭಾರತದ ಶೇ.22ರಷ್ಟು ಮಕ್ಕಳು ಒಂದಲ್ಲಾ ಒಂದು ರೀತಿ ತಂಬಾಕಿನ ರುಚಿ ನೋಡಿರುತ್ತಾರೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಹೀಗಾಗಿ ಮಕ್ಕಳಲ್ಲಿ ತಂಬಾಕಿನ ಅಪಾಯದ ಹೆಚ್ಚಿನ ಅರಿವು ಮೂಡಿಸುವುದು ಮುಖ್ಯ ಎಂದು ತಿಳಿಸಿದರು.

ಶಾಲೆಯಿಂದ ಹೊರ ಬಿದ್ದ ಮಕ್ಕಳು ಹಾಗೂ ಸ್ಲಂನಲ್ಲಿರುವ ಮಕ್ಕಳು ತಂಬಾಕು ವ್ಯಸನಕ್ಕೆ ಸಿಲುಕುವುದು ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿ ವರ್ಷ 100 ಶಾಲೆಗಳನ್ನು ದತ್ತು ತೆಗೆದುಕೊಂಡು, ಅಲ್ಲಿನ ಮಕ್ಕಳಲ್ಲಿ ತಂಬಾಕು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದವರು ಹೇಳಿದರು.

ಪಾಲಿಕೆ ಆಯುಕ್ತೆ ರೇಣುಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಅಪರ ಜಿಲ್ಲಾಧಿಕಾರಿ ಸೈಯದಾ ಅಫ್ರೀನ್ ಭಾನು ಎಸ್. ಬಳ್ಳಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಷಣ್ಮುಖಪ್ಪ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮಾಧಿ ಕಾರಿ ಡಾ. ಪಿ.ಎಂ. ತಿಪ್ಪೇಸ್ವಾಮಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಎಂ. ಚಂದ್ರಮೋಹನ್, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಲ್.ಎಂ. ಜ್ಞಾನೇಶ್ವರ್, ವಿ.ಎಸ್. ಪ್ಯಾರಾಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಶ್ವೇತಾ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!