ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಊಟದ ಸ್ವಾಗತ

ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಊಟದ ಸ್ವಾಗತ

ದಾವಣಗೆರೆ, ಮೇ 31- ಬಾಳೆಕಂದು, ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಳೆದ ಬುಧವಾರವೇ ಮಕ್ಕಳು ಶಾಲೆಗೆ  ಬರಲಾರಂಭಿಸಿ ದ್ದರಾದರೂ ಸಹ, ಇಂದು ಸ್ವಾಗತಿಸಲಾಯಿತು.

ಶಾಲೆಗಳಲ್ಲಿ ಬಿಸಿಯೂಟದ ಜೊತೆ ಮಕ್ಕಳಿಗಾಗಿ ವಿಶೇಷವಾಗಿ ಸಿಹಿ ಊಟ ನೀಡಲಾಯಿತು. ನಿಟುವಳ್ಳಿ ಸರ್ಕಾರಿ ಶಾಲೆಯಲ್ಲಿ ಲಾಡು ಮಾಡಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪಠ್ಯ-ಪುಸ್ತಕ, ಸಮವಸ್ತ್ರ ವಿತರಿಸಲಾಯಿತು.

ಕಳೆದ ಎರಡು ದಿನಗಳಿಗಿಂತ ಇಂದು ಆಗಮಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.  ಒಂದೂವರೆ ತಿಂಗಳ ಬೇಸಿಗೆ ರಜೆಯ ನಂತರ ಶಾಲೆಗೆ ಮರಳಿದ ಮಕ್ಕಳಲ್ಲಿ ಸಹಪಾಠಿಗಳನ್ನು ಮತ್ತೆ ಭೇಟಿ ಮಾಡಿದ ಸಂಭ್ರಮವಿತ್ತು.

ಮೇ 31ರಿಂದ ಜೂನ್‌ 30ರವರೆಗೆ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗಳಿಗೆ ಕರೆತರಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1,201 ಸರ್ಕಾರಿ ಶಾಲೆಗಳು, 312 ಅನುದಾನಿತ, 464 ಅನುದಾನ ರಹಿತ, ಸಮಾಜ ಕಲ್ಯಾಣ ಇಲಾಖೆಯ 35 ಶಾಲೆಗಳು ಹಾಗೂ ಎರಡು ಕೇಂದ್ರೀಯ ಶಾಲೆಗಳು ಸೇರಿ ಒಟ್ಟು 2014 ಶಾಲೆಗಳಿವೆ. ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ಹಂಚಿಕೆ ಬಹುತೇಕ ಪೂರ್ಣಗೊಂಡಿದೆ.

ಡಿಡಿಪಿಐ ಕೊಟ್ರೇಶ್ ಅವರು ನಿಟುವಳ್ಳಿ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ, ಪಠ್ಯ ಪುಸ್ತಕದೊ ಜೊತೆ ಹೂ ನೀಡಿ ಮಕ್ಕಳನ್ನು ಸ್ವಾಗತಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. 

ಸಿಆರ್‌ಪಿ ವಿಷಯ ಪರಿವೀಕ್ಷಕ ಹೆಚ್.ಎಂ. ಸುರೇಶ್, ಸ್ವಾಮಿ, ಶಿಕ್ಷಕರಾದ ಜಯಪ್ಪ, ಅಜಯ್ ನಾರಾಯಣ್, ಸೇವಾದಳ ಸಂಘಟಕ ಪಕ್ಕೀರ್ ಗೌಡ ಶಾಲಾ ಸಿಬ್ಬಂದಿಗಳು, ಎಸ್‌ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿದ್ದರು.

ಇದೇ ಸಂದರ್ಭದಲ್ಲಿ ಅಕ್ಷರದಾಸೋಹ ಶಿಕ್ಷಣಾಧಿಕಾರಿಗಳು ಡಿ.ದುರುಗಪ್ಪ ನವರು ದಾನಿಗಳಿಂದ  ಸಂಗ್ರಹಿಸಿದ್ದ ಅಡುಗೆ ಪರಿಕರಗಳನ್ನು ಉದ್ಘಾಟಿಸಿದರು.

error: Content is protected !!