ಬಿತ್ತನೆ ಬೀಜ ದರ ಏರಿಕೆ ಖಂಡಿಸಿ ಪ್ರತಿಭಟನೆ

ಬಿತ್ತನೆ ಬೀಜ ದರ ಏರಿಕೆ ಖಂಡಿಸಿ ಪ್ರತಿಭಟನೆ

ಸಹಾಯಧನ ಹೆಚ್ಚಿಸಿ ಕಡಿಮೆ ದರದಲ್ಲಿ ಬೀಜ ವಿತರಿಸಲು ಬಿಜೆಪಿ ರೈತ ಮೋರ್ಚಾ ಆಗ್ರಹ

ದಾವಣಗೆರೆ, ಮೇ 29- ಬಿತ್ತನೆ ಬೀಜದ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಎಪಿಎಂಸಿ ಬಳಿಯ ರೈತ ಸಂಪರ್ಕ ಕೇಂದ್ರದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರಿಗೆ ಸಹಾಯ ಧನ ಹೆಚ್ಚಳ ಮಾಡಿ ಕಡಿಮೆ ದರದಲ್ಲಿ ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಲಾಯಿತು.

ಕಳೆದ ಹಂಗಾಮಿನಲ್ಲಿ ರೈತರು ಭೀಕರ ಬರಗಾಲದಿಂದ ಬಸವಳಿದಿದ್ದಾರೆ. ಈ ವೇಳೆ ಬಿತ್ತನೆ ಬೀಜದ ದರ ಏರಿಕೆಯಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ಬೆಲೆ ಇಳಿಕೆಗೆ ಕ್ರಮ ವಹಿಸುವಂತೆ ಒತ್ತಾಯಿಸಲಾಯಿತು.

ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸ ಬೇಕು. ನಕಲಿ ಬಿತ್ತನೆ ಬೀಜದ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದು,  ಮೆಕ್ಕೆಜೋಳ ಬೀಜಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಸಮರ್ಪಕವಾಗಿ ಬರ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಲಾಯಿತು.

ಮಾಜಿ ಶಾಸಕ ಬಸವರಾಜನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ್, ರಮೇಶನಾಯ್ಕ, ಬೇತೂರು ಸಂಗನಗೌಡ್ರು, ಅಣಬೇರು ಶಿವಪ್ರಕಾಶ್, ರಘುನಂದನ ಅಂಬರಕರ್, ಆನೆಕೊಂಡ ರೇವಣಸಿದ್ದಪ್ಪ, ಅತಿಥ್ ಅಂಬರಕರ್, ಪಿ.ಎಸ್.ಬಸವರಾಜು, ವೀರೇಶ ಪೈಲ್ವಾನ್, ಆರ್.ಎಲ್. ಶಿವಪ್ರಕಾಶ್, ಅಣಜಿ ಗುಡ್ಡೇಶ್,  ಜಿ.ಎಸ್ ಶ್ಯಾಮ್, ಕೆ.ಜಿ ಕಲ್ಲಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!