ನಾಳೆ ಸಿಹಿ ಊಟದ ಸ್ವಾಗತ, ನಿಟುವಳ್ಳಿ ಶಾಲೆಯಲ್ಲಿ ದಾಖಲಾತಿಗೆ ಸರದಿಯಲ್ಲಿ ನಿಂತ ಪಾಲಕರು
ದಾವಣಗೆರೆ: ಕಳೆದೆರಡು ತಿಂಗಳಿನಿಂದ ಮೌನವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಬುಧವಾರ ಶಾಲಾ ಘಂಟೆ ಬಾರಿಸಿದೆ. ಮಕ್ಕಳ ಚಿಲಿಪಿಲಿ ಶುರುವಾಗಿದೆ. ಶಿಕ್ಷಕರು ದಾಖಲಾತಿ ಕಾರ್ಯದಲ್ಲಿ ಬ್ಯೂಸಿಯಾಗಿದ್ದರೆ, ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಗಳಲ್ಲಿ ಮಗ್ನರಾಗಿದ್ದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸಂತೃಪ್ತಿ ಇಲ್ಲದ ಪೋಷಕರು, ಶಿಕ್ಷಣ-ಶುಲ್ಕದ ಬಗ್ಗೆ ಅಳೆದೂ, ತೂಗಿ ಉತ್ತಮ ಶಾಲೆ ಎಂದು ನಿಶ್ಚಯಿಸಿಕೊಂಡ ಶಾಲೆಗಳತ್ತ ದೌಡಾಯಿಸುತ್ತಿದ್ದಾರೆ.
ಬಹುತೇಕ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ. ಮೇ 31ರಿಂದ ಮಕ್ಕಳಿಗೆ ಅದ್ಧೂರಿ ಸ್ವಾಗತ ಕೋರಲು, ಬಿಸಿಯೂಟದಲ್ಲಿ ಸಿಹಿಯೂಟ ನೀಡಲು ಶಿಕ್ಷಣ ಇಲಾಖೆ ಸೂಚಿಸಿದೆಯಾದರೂ, ಇಂದಿನಿಂದಲೇ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ.
ನಿಟುವಳ್ಳಿಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಇಂಗ್ಲೀಷ್ ಮಾಧ್ಯಮ ವಿಭಾಗಕ್ಕೆ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂಜಾನೆ 5 ಗಂಟೆಯಿಂದಲೇ ಶಾಲಾ ಮುಂಭಾಗ ಸರದಿ ಸಾಲಿನಲ್ಲಿ ನಿಂತಿದ್ದರು.
ಶಾಲೆ ಆರಂಭವಾದಾಗ ಆಗಮಿಸಿದ್ದ ಶಿಕ್ಷಕರು 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಎಲ್ಲರೂ ದಾಖಲೆಗಳನ್ನು ಕೊಡಿ ಲಾಟರಿ ಮೂಲಕ 30 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತೇವೆ ಎಂದಾಗ, ಬೆಳಿಗ್ಗೆಯಿಂದ ನಿಂತಿದ್ದ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಟಿ.ಎಸ್. ಸ್ವಾಮಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಪ್ರತಿ ವರ್ಷವೂ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. 40ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಲು ಬಂದಿದ್ದಾರೆ. ಎಲ್ಲರಿಂದಲೂ ದಾಖಲೆಗಳನ್ನು ಪಡೆದು ಪರಿಶೀಲಿಸಿ 30ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಮೂರು ಶಾಲೆಗಳು 2ನೇ ಹಂತದ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ ಈ ಶಾಲೆಯೊಂದೇ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತವರ್ಷವೇ ಎಲ್‌ಕೆಜಿ ಆರಂಭಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಸ್ವಾಮಿ ತಿಳಿಸಿದರು.
ಸದ್ಯ ದಾಖಲಾತಿಗಳು ನಡೆಯುತ್ತಿವೆ. ಸ್ವಚ್ಛತಾ ಕಾರ್ಯಗಳೂ ನಡೆಯುತ್ತಿವೆ. ಶುಕ್ರವಾರ ಮಕ್ಕಳಿಗೆ ಬಿಸಿಯೂಟದಲ್ಲಿ ಸಿಹಿ ತಯಾರಿಸಿ ಕೊಡಲಾಗುವುದು. ಅಂದೇ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.
ನಿಂಚನ ಶಾಲೆಯಲ್ಲಿ ಶಾರದ ಪೂಜೆ: ನಿಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶಾರದಾ ಪೊಜೆಯೊಂದಿಗೆ ಶಾಲೆ ಆರಂಭಿಸಲಾಯಿತು. ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿದರು. ತಳಿರು ತೋರಣಗಳಿಂದ ಶಾಲೆ ಸಿಂಗರಿಸಲಾಗಿತ್ತು.