ಜಿಲ್ಲಾ ಕೋರ್ಟ್‌ನಲ್ಲಿ `ನ್ಯಾಯಾಧೀಶರಿಗೆ ಸ್ವಾಗತ’ ಕಾರ್ಯಕ್ರಮದಲ್ಲಿ ನ್ಯಾ. ರಾಜೇಶ್ವರಿ ಹೆಗಡೆ
ದಾವಣಗೆರೆ, ಮೇ 27- ನ್ಯಾಯಾಧೀಶರು ಮತ್ತು ವಕೀಲರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಜತೆಗೆ ಹೆಚ್ಚೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ವಕೀಲರ ಸಂಘದಿಂದ ನಗರದ ಜಿಲ್ಲಾ ಕೋರ್ಟ್ ಭವನದಲ್ಲಿ ಸೋಮವಾರ ನಡೆದ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಕ್ಷಿದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಲ್ಲಿನ ವಕೀಲರು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸೂಕ್ತ ಮಾರ್ಗದರ್ಶನದ ಜತೆಗೆ ನ್ಯಾಯ ಕೊಡಿಸುವಲ್ಲಿ ಮುಂದಾಗಿದ್ದಾರೆ ಎಂದರು.
ಕಳೆದ 3 ವರ್ಷಗಳಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ವಕೀಲರ ಸಹಕಾರದಿಂದ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇವೆ ಎಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ನ್ಯಾಯಾಧೀಶರ ಗೌರವಕ್ಕೆ ಚ್ಯುತಿ ಬಾರದಂತೆ ನಾವೆಲ್ಲರೂ ನ್ಯಾಯದಾನ ಮಾಡು ವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.
ವರ್ಗಾವಣೆಯಿಂದ ದಾವಣಗೆರೆಗೆ ಆಗಮಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಎಸ್‌ಟಿಎಫ್‌ಸಿ-1ರ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ ವಿ.ಎಲ್. ಅಮರ್, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ ಸಿ. ನಾಗೇಶ್ ಅನುಭವ ಹಂಚಿಕೊಂಡರು.
ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾ, ಗಾಯತ್ರಿ ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ನಾಜಿಯಾ ಕೌಸರ್, ಮಹಾವೀರ ಮ. ಕರೆಣ್ಣನವರ್, ವಕೀಲರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎಂ. ಚೌಡಪ್ಪ, ಟಿ.ಎಚ್. ಮಧುಸೂದನ್, ಎಲ್.ನಾಗರಾಜ್, ಕೆ.ಎಂ. ನೀಲಕಂಠಯ್ಯ, ಎಂ. ರಾಘವೇಂದ್ರ, ಜಿ.ಜೆ. ಸಂತೋಷ್ ಕುಮಾರ್, ವಾಗೀಶ್ ಕಟಗಿಹಳ್ಳಿಮಠ ಇದ್ದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳು ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು.