ಹರಿಹರ ತಾಲ್ಲೂಕು ರೈತರ ಮುಖದಲ್ಲಿ ಮಂದಹಾಸ..

ಹರಿಹರ ತಾಲ್ಲೂಕು ರೈತರ ಮುಖದಲ್ಲಿ ಮಂದಹಾಸ..

ಹರಿಹರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಉತ್ತಮವಾಗಿ ಮಳೆ ಆಗಿರುವುದ ರಿಂದ  ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಬಿತ್ತನೆ ಕಾರ್ಯಕ್ಕೆ ಸಜ್ಜುಗೊಂಡಿದ್ದಾರೆ. 

ಮಳೆಯಾಗದೇ  ತಾಲ್ಲೂಕಿನ  ರೈತರ ಬದುಕು ದುಸ್ತರವಾಗಿತ್ತು.   ಮಳೆಗಾಗಿ ಪ್ರಾರ್ಥಿಸಿ   ದೇವಸ್ಥಾನಗಳಲ್ಲಿ   ವಿಶೇಷ ಹೋಮ-ಹವನ, ಅಭಿಷೇಕ ಸೇರಿದಂತೆ ವಿವಿಧ ಬಗೆಯ ಪೂಜೆಗಳನ್ನು ನಡೆಸಲಾಯಿತು. ಅಲ್ಲದೇ ಕತ್ತೆ ಮೆರವಣಿಗೆ ಕೂಡಾ ನಡೆಯಿತು.  

ಮುಂ ಗಾರು ಮಳೆ   ಆರಂಭವಾಗುವುದು ಜೂನ್ 3ರಿಂದ ಆಗಿದ್ದರೂ ಸಹ ಕೆಲವು ಕಡೆಗಳಲ್ಲಿ ಸೈಕ್ಲೋನ್ ಪರಿಣಾಮದಿಂದ, ಜೊತೆಗೆ ರೋಹಿಣಿ ಮಳೆಯಿಂದ ಈಗಾಗಲೇ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಆಗಿದ್ದು ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ರೈತರು ಹದಗೊಳಿಸುತ್ತಿದ್ದಾರೆ, ಜೊತೆಗೆ ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯವು ಆರಂಭವಾಗಿದೆ. 

ಮುಂ ಗಾರು ಮಳೆಗಿಂತ ರೋಹಿಣಿ ಮಳೆ ಚೆನ್ನಾಗಿ ಬಂದು, ಬಿತ್ತನೆ ಕಾರ್ಯಗಳು ನಡೆದಾಗ ಬೆಳೆಗಳಿಗೆ ಕೀಟಬಾಧೆ ಸೇರಿದಂತೆ ಯಾವುದೇ ತರಹದ ರೋಗಗಳು ಬರುವುದು ಕಡಿಮೆ ಎಂಬುದು ರೈತರಲ್ಲಿ ನಂಬಿಕೆ ಮಾತಾಗಿದೆ.  ಹಾಗಾಗಿ ಈಗ ಬಂದಿರುವ ಮಳೆಯಿಂದಾಗಿ ರೈತರು ಸಂತಸವನ್ನು ಹೊಂದಿದ್ದಾರೆ.

ಹರಿಹರ ತಾಲ್ಲೂಕಿನಲ್ಲಿ ಒಟ್ಟು 32 ಸಾವಿರ ಹೆಕ್ಟೇರ್ ಪ್ರದೇಶ ಇದ್ದು, ಅದರಲ್ಲಿ 23  ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ. ಉಳಿದಂತೆ 7300 ಹೆಕ್ಟೇರ್ ಮೆಕ್ಕೆಜೋಳ, 80 ಹೆಕ್ಟೇರ್ ಜೋಳ, 435 ಹೆಕ್ಟೇರ್ ತೊಗರಿ, 80 ಹೆಕ್ಟೇರ್ ಅಲಸಂದಿ, 25 ಹೆಕ್ಟೇರ್ ಹೆಸರು, 100 ಹೆಕ್ಟೇರ್ ಸೊಯಾಬಿನ್ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. 

ಮಳೆ ಆಶ್ರಿತ ಪ್ರದೇಶದ ಗ್ರಾಮಗಳಾದ ಕೊಪ್ಪ, ಜಿ.ಟಿ.ಕಟ್ಟಿ, ಕೊಕ್ಕನೂರು, ಕೆ.ಎನ್. ಹಳ್ಳಿ, ನಂದಿಗಾವಿ, ಬಿಳಸನೂರು, ರಾಜನ ಹಳ್ಳಿ ಹಳ್ಳಿ, ತಿಮ್ಮಲಾಪುರ, ಹೊಸಹಳ್ಳಿ ಬೆಳ್ಳೂಡಿ, ಭಾನುವಳ್ಳಿ, ಕೊಂಡಜ್ಜಿ, ಅಮರಾವತಿ, ದೊಗ್ಗಳ್ಳಿ ಮತ್ತು ಇತರೆ ಗ್ರಾಮಗಳಲ್ಲಿ ಮೆಕ್ಕೆಜೋಳ, ಜೋಳ, ಅಲಸಂದಿ ತೊಗರಿ, ಹೆಸರು ಬಿತ್ತನೆ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಭೂಮಿಯನ್ನು ಹದಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ.

ಹರಿಹರ ತಾಲ್ಲೂಕಿನಲ್ಲಿ ಅನೇಕ ತಿಂಗಳ ಕಾಲ ಮಳೆ ಆಗದೆ ಇದ್ದ ಪರಿಣಾಮ ತೋಟ ಗಾರಿಕೆ ಬೆಳೆಗಳಾದ ಅಡಿಕೆ, ಬಾಳೆ, ಎಲೆ, ತೆಂಗು, ಕಬ್ಬು ಈ ರೀತಿಯ ಬೆಳೆಗಳು  ಸಂಪೂರ್ಣ ಒಣಗುವ ಹಂತದಲ್ಲಿ ಇದ್ದವು. ಆದರೆ, ಈ ಮಳೆ ಯಿಂದಾಗಿ ಮತ್ತೆ ಚೇತರಿಕೆಯನ್ನು ಕಂಡುಕೊಂಡಿವೆ.

ಹರಿಹರ ತಾಲ್ಲೂಕು ರೈತರ ಮುಖದಲ್ಲಿ ಮಂದಹಾಸ.. - Janathavani

ಮಳೆ ಬೀಳುವ ಲಕ್ಷಣಗಳು ಆಗು ತ್ತಿದ್ದಂತೆ ಇತ್ತ ಕೃಷಿ ಇಲಾಖೆ ಜೊತೆಗೆ ಪರಿಕರ ಮಾರಾಟಗಾರರೂ ಸಹ     ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿ ದಾಸ್ತಾನು ಲಭ್ಯವಿರುವಂತೆ ಸಿದ್ದತೆ ಮಾಡಿಕೊಂಡಿದ್ದಾರೆ.   ರೈತರು   ಲೂಸ್ ಬೀಜಗಳನ್ನು (ಕಳಪೆ ಬೀಜಗಳು) ಪಡೆದು ಬಿತ್ತನೆ ಮಾಡದೇ ಅಧಿಕೃತ ಮಾರಾಟಗಾರರ ಬಳಿ ರಶೀದಿ ಪಡೆದುಕೊಂಡು ಬೀಜ, ಡಿ.ಎ.ಪಿ. ಯೂರಿಯಾ ಮತ್ತಿತರೆ ರಸಗೊಬ್ಬರ ಖರೀದಿಸು ವಂತೆ ಕೃಷಿ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ.

ಅಲ್ಲದೆ ಸೂಕ್ಷ್ಮ ಪೋಷಕಾಂಶದ ಗೊಬ್ಬರವನ್ನು ಭೂಮಿಗೆ ಹಾಕಿದರೆ ಬೆಳೆಗಳಿಗೆ ಕೀಟನಾಶಕಗಳನ್ನು ತಡೆಯುವ ಶಕ್ತಿ ಬರುತ್ತದೆ. ಜೊತೆಗೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

ರೈತರಿಗೆ, ರೈತ ಸಂಪರ್ಕ ಕೇಂದ್ರದ ಮೂಲಕ ಮೆಕ್ಕೆಜೋಳ, ಜೋಳ, ಅಲಸಂದಿ, ಸೊಯಾ ಬಿನ್, ತೊಗರಿ ಮತ್ತಿತರೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಸಾಮಾನ್ಯ ರೈತರಿಗೆ ಶೇ. 20 ರಷ್ಟು ಮತ್ತು ಎಸ್ಸಿ.ಎಸ್ಟಿ ಶೇ 30ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಗರಿಷ್ಠ 5  ಎಕರೆ ವರೆಗೂ ಲಭ್ಯವಿದ್ದು 1 ಹೆಕ್ಟೇರ್‌ಗೆ  2 ಪ್ಯಾಕೇಟ್ ನಂತೆ ಲಭ್ಯವಿರುತ್ತದೆ.

ಕಳೆದ ಬಾರಿ ಅನೇಕ ಜಮೀನಿನಲ್ಲಿ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಂಡಿತ್ತು, ಆಗ ಕೃಷಿ ಇಲಾಖೆ   ರೈತರಿಗೆ ತಾಂತ್ರಿಕ ಮಾಹಿತಿ ನೀಡಿದ ಪರಿಣಾಮ  ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲ ಆಗಿದ್ದರಿಂದ ಈ ಬಾರಿಯೂ ಕೂಡ ಎಲ್ಲಾ ಗ್ರಾಮಗಳಲ್ಲಿ ರೈತರ ವಾಟ್ಸಾಪ್ ಗ್ರೂಪ್ ಮಾಡಿ ಆ ಮೂಲಕ ಬೆಳೆಗಳ ಬಗ್ಗೆ ಸಂಪೂರ್ಣ ತಾಂತ್ರಿಕ ಮಾಹಿತಿ ಒದಗಿಸುವ ಕಾರ್ಯಕ್ಕೆ ಇಲಾಖೆ  ಮುಂದಾಗಿದೆ.


– ಎಂ.ಚಿದಾನಂದ ಕಂಚಿಕೇರಿ

error: Content is protected !!