ತಳಿರು-ತೋರಣದಿಂದ ಶಾಲೆ ಸಿಂಗರಿಸಲು ಸೂಚನೆ, ಪುಸ್ತಕ, ಬ್ಯಾಗ್ ಖರೀದಿ ಜೋರು
ದಾವಣಗೆರೆ, ಮೇ 27- 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು ನಾಡಿದ್ದು ದಿನಾಂಕ 29 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ 1,201 ಸರ್ಕಾರಿ ಶಾಲೆಗಳು, 312 ಅನುದಾನಿತ, 464 ಅನುದಾನ ರಹಿತ, ಸಮಾಜ ಕಲ್ಯಾಣ ಇಲಾಖೆಯ 35 ಶಾಲೆಗಳು ಹಾಗೂ ಎರಡು ಕೇಂದ್ರೀಯ ಶಾಲೆಗಳು ಸೇರಿ ಒಟ್ಟು 2014 ಶಾಲೆಗಳಿವೆ.
ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡುವ ಜೊತೆಗೆ ಸಿಹಿ ಊಟದ ಕೊಡಲು ಶಿಕ್ಷಣ ಇಲಾಖೆಯಿಂದ ಈಗಾಗಲೇ ಎಲ್ಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ.
ಜಿಲ್ಲೆಗೆ ಶೇ.100ರಷ್ಟು ಸಮವಸ್ತ್ರಗಳು ಬಂದಿವೆ. ಪಠ್ಯ ಪುಸ್ತಕ ಶೇ.80ರಷ್ಟು ಪೂರೈಕೆಯಾಗಿವೆ. ಈಗಾಗಲೇ ಎಲ್ಲಾ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸ್ವಚ್ಛತಾ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಅದ್ಧೂರಿಯಾಗಿ ಮಕ್ಕಳನ್ನು ಸ್ವಾಗತಿಸಲು ನಿರ್ದೇಶಿಸಲಾಗಿದೆ ಎಂದು ಡಿಡಿಪಿಐ ಜಿ. ಕೊಟ್ರೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಶಾಲೆಗಳ ಕಸರತ್ತು
ಬಹುತೇಕ ಖಾಸಗಿ ಶಾಲೆಗಳಲ್ಲಿ ಈಗಾಗಲೇ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಶಾಲೆಗಳು ತೀವ್ರ ಕಸರತ್ತು ನಡೆಸುತ್ತಿವೆ. ಬೇಸಿಗೆ ರಜೆಯ ಅವಧಿಯಲ್ಲಿ ಶಾಲಾ ಶಿಕ್ಷಕರೇ ಪ್ರತಿ ಮನೆಗಳಿಗೂ ತೆರಳಿ ಮಕ್ಕಳನ್ನು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಶಾಲೆಯ ವಿಶೇಷತೆಗಳ ಮಾಹಿತಿಯ ಪಾಂಪ್ಲೆಟ್ಸ್ಗಳನ್ನು ಮನೆ-ಮನೆಗಳಿಗೆ ಹಂಚಲಾಗುತ್ತಿದೆ.
ಪಠ್ಯ ಸಾಮಗ್ರಿ ಖರೀದಿ ಜೋರು
ನಗರದ ಮಂಡಿಪೇಟೆ ಸೇರಿದಂತೆ ವಿವಿಧ ಬುಕ್ಸ್ಟಾಲ್ಗಳಲ್ಲಿ ಬ್ಯಾಗ್, ನೋಟ್ಬುಕ್, ಪೆನ್ ಮೊದಲಾದ ವಸ್ತುಗಳ ಖರೀದಿ ಭರದಿಂದ ನಡೆಯುತ್ತಿದೆ. ಖರೀದಿಯಲ್ಲಿ ಗ್ರಾಮೀಣರೇ ಹೆಚ್ಚಾಗಿದ್ದಾರೆ. ಮಳೆಗಾಲವಾದ್ದರಿಂದ ಮಕ್ಕಳಿಗಾಗಿ ಚಿಕ್ಕ ಕೊಡೆಗಳಿಗೂ ಬೇಡಿಕೆ ಹೆಚ್ಚಾಗಿದೆ.
ಮೇ 29ರ ಶಾಲಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಶಾಲಾರಂಭದ ದಿನವನ್ನು ವಿಶೇಷ ಹಾಗೂ ಅದ್ಧೂರಿಯಾಗಿ ಆಚರಿಸಲು ಹಾಗೂ ಆರಂಭಿಕ ದಿನದಂದು ಸಿಹಿ ವಿತರಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.
– ಜಿ. ಕೊಟ್ರೇಶ್, ಡಿಡಿಪಿಐ
ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನಕ್ಕೆ ಇಲಾಖೆ ರೂಪುರೇಷೆ ಸಿದ್ಧಪಡಿಸಿ ನೀಡಿದೆ. ಆಯಾ ಶೈಕ್ಷಣಿಕ ವಲಯಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಜಾಥಾಗಳನ್ನು ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.
ದುರಸ್ತಿಗೆ ಕ್ರಮ: ಶಾಲಾರಂಭಕ್ಕೆ ಕೆಲವೇ ದಿನ ಇರುವುದರಿಂದ ಶಾಲಾವರಣದ ಸ್ವಚ್ಛತೆ, ಸುಣ್ಣಬಣ್ಣ ಹಾಗೂ ಕೊಠಡಿ, ಮೈದಾನ, ಪೀಠೋಪಕರಣ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ದುರಸ್ತಿ ಕಾರ್ಯಗಳಿದ್ದರೂ ಮೇ 29ರೊಳಗೆ ಪೂರ್ಣಗೊಳಿಸಬೇಕು. ಮಳೆಗಾಲದಲ್ಲಿ ಮಕ್ಕಳಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ ನೀಡಿದ್ದಾರೆ.