ದಾವಣಗೆರೆ, ಮೇ 26 – ಚನ್ನಗಿರಿ ಠಾಣೆಯಲ್ಲಿ ಆದಿಲ್ ಸಾವು ಸಂಭವಿಸಿದ ಹಾಗೂ ಉದ್ರಿಕ್ತ ಗುಂಪು ಪೊಲೀಸ್ ಠಾಣೆ ಧ್ವಂಸಗೊಳಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಚನ್ನಗಿರಿ ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ಆದಿಲ್ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವು ಸಂಭವಿಸಿತ್ತು. ನಂತರ ನೂರಾರು ಜನ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿ, ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ವಾಹನಗಳು ಜಖಂ ಆಗಿದ್ದವು ಹಾಗೂ ಹಲವು ಪೊಲೀಸರು ಗಾಯಗೊಂಡಿದ್ದರು.
ಠಾಣೆ ಧ್ವಂಸ : 25 ಜನರ ಬಂಧನ
ದಾವಣಗೆರೆ, ಮೇ 26- ಚನ್ನಗಿರಿ ಪೊಲೀಸ್ ಠಾಣೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ 25 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಧ್ವಂಸ, ದೊಂಬಿ ಹಾಗೂ ಪೊಲೀಸ್ ವಶದಲ್ಲಿದ್ದ ಆದಿಲ್ ಸಾವಿನ ಕೇಸ್ಗೆ ಸಂಬಂಧಿಸಿದಂತೆ ಚನ್ನಗಿರಿ ಠಾಣೆಯಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ 25 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದವರು ಹೇಳಿದ್ದಾರೆ.
ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ವಿಚಾರಣೆಗಾಗಿ ಚನ್ನಗಿರಿ ಪೊಲೀಸರು ಆದಿಲ್ನನ್ನು ಶುಕ್ರವಾರ ಠಾಣೆಗೆ ಕರೆದುಕೊಂಡು ಬಂದಾಗ, ಆದಿಲ್ ಕುಸಿದು ಬಿದ್ದು ಮೃತಪಟ್ಟಿದ್ದರು.
ಆದಿಲ್ ಅವರದು ಲಾಕಪ್ಡೆತ್ ಎಂದು ಆರೋಪಿಸಿ ಮೃತನ ಸಂಬಂಧಿಕರು, ಸಮುದಾಯದವರು ಕಲ್ಲು ತೂರಾಟ ನಡೆಸಿ, ದಾಂಧಲೆ ಮಾಡಿದ್ದರಿಂದ 11 ಪೊಲೀಸರು ಗಾಯಗೊಂಡಿದ್ದರು. ಉದ್ರಿಕ್ತರ ಆಕ್ರೋಶಕ್ಕೆ ಪೊಲೀಸ್ ವಾಹನಗಳ ಜಖಂ ಹಾಗೂ ಕಲ್ಲು ತೂರಾಟದಿಂದ ಠಾಣೆ ಧ್ವಂಸವಾಗಿತ್ತು. ಇದೀಗ ಚನ್ನಗಿರಿಯಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದ್ದು, ಪಟ್ಟಣ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಶನಿವಾರ ನ್ಯಾಯಾಧೀಶರ ಎದುರು ಆದಿಲ್ನ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಪೊಲೀಸ್ ಠಾಣೆ ಎದುರು ನಡೆದ ದಾಂಧಲೆ ಪ್ರಕರಣದ ಆರೋಪಿಗಳ ಪತ್ತೆಗೆ 5 ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಸಿ.ಸಿ. ಕ್ಯಾಮೆರಾ, ಮೊಬೈಲ್ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿವೆ. ಬಂತ ಚನ್ನಗಿರಿ, ಹೊನ್ನೆ ಬಾಗಿ, ನಲ್ಲೂರು ಗ್ರಾಮಗಳ 25 ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಘಟನೆ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಚನ್ನಗಿರಿ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತಹ, ಧಾರ್ಮಿಕ ಹಾಗೂ ವ್ಯಕ್ತಿ ನಿಂದನೆ ಪೋಸ್ಟಗಳು, ಪ್ರಚೋದನಕಾರಿ ಹೇಳಿಕೆ, ವಿಡಿಯೋ ಶೇರ್ ಮಾಡಬಾರದು. ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಇದೀಗ ಸಿಐಡಿ ಹೆಗಲಿಗೆ ನೀಡಲಾಗಿದ್ದು, ಶೀಘ್ರವೇ ಸಿಐಡಿ ಅಧಿಕಾರಿಗಳು ಪ್ರಕರಣದ ಮುಂದಿನ ತನಿಖೆ ಆರಂಭಿಸಲಿದ್ದಾರೆ. ಸಿ.ಐ.ಡಿ. ಅಧಿಕಾರಿಗಳು ಈಗಾಗಲೇ ಬಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 25 ಆರೋಪಿಗಳನ್ನು ಬಂಧಿಸ ಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದವರು ಹೇಳಿದ್ದಾರೆ.