ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆಗೆ ಆಗ್ರಹ

ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆಗೆ ಆಗ್ರಹ

ದಾವಣಗೆರೆ, ಮೇ 23- ಈಗಾಗಲೇ ಮುಂಗಾರಿನ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲಕ್ಕೆ ಸರಬರಾಜು ಮಾಡಬೇಕು. ಕಬ್ಬು ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸಿ, ಬೆಳೆ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಜಿ.ಬಿ. ವಿನಯ್ ಕುಮಾರ್ ನೇತೃತ್ವದಲ್ಲಿ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಸೈಯಿದಾ ಆಫ್ರಿನ್ ಬಾನು ಎಸ್. ಬಳ್ಳಾರಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ವಿನಯ್ ಕುಮಾರ್ ಅವರು, ರೈತ ಈ ದೇಶದ ಬೆನ್ನೆಲುಬು. ರೈತ ಬೆಳೆದರೆ ಮಾತ್ರ ಅನ್ನ ಸಿಗಲು ಸಾಧ್ಯ. ಇಂತಹ ರೈತ ಇಂದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಳೆ, ಉತ್ತಮ ಬೀಜ, ಗೊಬ್ಬರ ನಂಬಿ ಉಳುಮೆ ಮಾಡಿದ್ದು, ಸಕಾಲಕ್ಕೆ ಮಳೆ ಬಾರದೇ, ಕೆಲವೊಮ್ಮೆ ಕಳಪೆ ಬೀಜ, ಗೊಬ್ಬರದಿಂದಲೂ ನಷ್ಟವನ್ನೂ ಸಹ ಅನುಭವಿಸಿದ್ದಾನೆ. ಈ ಮಧ್ಯೆ ಶ್ರಮಪಟ್ಟು ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾನೆ. ರೈತರ ಹಿತ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ದಾವಣಗೆರೆ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಈಗಾಗಲೇ ಜಿಲ್ಲೆಯ ರೈತ ಮುಖಂಡರು, ಕಬ್ಬು ಬೆಳೆಗಾರರು ಕಬ್ಬು ಬೆಳೆಯ ಹಾನಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಿದ್ದಾರೆ.ಜಿಲ್ಲೆಯಲ್ಲಿ ಸುಮಾರು 2070 ಎಕರೆ ಕಬ್ಬಿನ ಬೆಳೆ ನಾಶವಾಗಿರುವ ವರದಿ ಇದೆ. ಒಂದು ಎಕರೆ ಕಬ್ಬನ್ನು ಬೆಳೆಯಲು ಸುಮಾರು 45 ಸಾವಿರ ರೂ. ವೆಚ್ಛ ತಗುಲುತ್ತದೆ ಎಂದು ಹೇಳಿದರು.

ಸಾಲ ಮಾಡಿದ ರೈತನ ಕೈಗೆ ಬೆಳೆ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಧಾವಿಸಬೇಕಾಗಿದೆ. ಕಬ್ಬು ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರು ಈ ಬಾರಿ ಮುಂಗಾರು ಮಳೆ ಆರಂಭವಾದ ಕಾರಣ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕಿದೆ. ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಬೇಕಾಗಿದೆ ಎಂದು ಮನವಿ ಮಾಡಿದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ರೈತರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ ಎಂದರು.

ಜಿಲ್ಲೆಯ ರೈತ ಸಂಘಟನೆಗಳ ಮುಖಂಡರ ಸಭೆ ಕರೆದು ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾಗಿದೆ. ರೈತರ ಬೆಂಬಲಕ್ಕೆ ಜಿಲ್ಲಾಡಳಿತ ನಿಂತಿದೆ ಎಂಬ ನಂಬಿಕೆ, ವಿಶ್ವಾಸ ಬರುವಂತಹ ಕಾರ್ಯಗಳನ್ನು ಜಿಲ್ಲಾಡಳಿತ ಕೈಗೆತ್ತಿಕೊಳ್ಳುವುದನ್ನು ಸ್ವಾಭಿಮಾನಿ ಬಳಗ ಎದುರು ನೋಡುತ್ತದೆ ಎಂದು ಹೇಳಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸ್ವಾಭಿಮಾನಿ ಬಳಗದ ರಾಜು ಮೌರ್ಯ, ಸಿದ್ಧಲಿಂಗಪ್ಪ, ಹಾಲೇಕಲ್ಲು ವೀರಣ್ಣ, ಆರ್.ಬಿ. ಪರಮೇಶ್, ಷಣ್ಮುಖಪ್ಪ, ಶಾಮನೂರು ಗೀತಾ ಮುರುಗೇಶ್, ಶಾಮನೂರು ಮುರುಗೇಶ್, ಪುರಂದರ್ ಲೋಕಿಕೆರೆ, ಮುರುಡಪ್ಪ, ಶಿವಕುಮಾರ್ ಸಾಂಬಳಿ, ಅನಂತ ಚಿಕ್ಕಬೂದಿಹಾಳ್, ಬಟ್ಟಲಕಟ್ಟೆ ಪರಶುರಾಮ್, ಸತೀಶ್, ರಂಗಸ್ವಾಮಿ, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!