ಪರಮಾತ್ಮನ ಜ್ಞಾನ ಪಡೆದವರ ಜೀವನ ಪಾವನ

ಪರಮಾತ್ಮನ ಜ್ಞಾನ ಪಡೆದವರ ಜೀವನ ಪಾವನ

ಬ್ರಹ್ಮಾಕುಮಾರಿ ಮಂಜುಳಾಜೀ ನುಡಿ ನಮನ ಕಾರ್ಯಕ್ರಮದಲ್ಲಿ ಡಾ. ಬಸವರಾಜ ರಾಜಋಷಿ ಪ್ರತಿಪಾದನೆ

ಮಲೇಬೆನ್ನೂರು, ಮೇ 22- ಜೀವನದಲ್ಲಿ ಪ್ರತಿಯೊಬ್ಬರ ಪಾತ್ರವೂ ಫಿಕ್ಸ್ ಆಗಿದ್ದು, ಪರಮಾತ್ಮನ ಜ್ಞಾನವನ್ನು ಯಾರು ಪಡೆಯುವರೋ ಅವರ ಜೀವನ ಪಾವನ ಆಗುತ್ತದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಪ್ರತಿಪಾದಿಸಿದರು.

ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀಯವರ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಡೀ ಜಗತ್ತೇ ದೇವರನ್ನು ಹುಡುಕುತ್ತಿದ್ದು, ಭಾರತದಲ್ಲಿ ಜನ ದೇವರನ್ನು ಹುಡುಕಿಕೊಂಡು ರಾಮೇಶ್ವರ, ಕೇದಾರ, ಕಾಶಿ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಆದರೆ, ಮಂಜುಳಕ್ಕನವರನ್ನು ಪರಮಾತ್ಮನೇ ಆಯ್ಕೆ ಮಾಡಿಕೊಂಡು ತನ್ನ ಸೇವೆ ಮಾಡಲು ನೇಮಕ ಮಾಡಿಕೊಂಡಿದ್ದನು. ಇದರಿಂದಾಗಿ ಮಂಜುಳಕ್ಕನವರ ಜೀವನ ಸಫಲವಾಯಿತು ಎಂದು ಅವರು ಉದಾಹರಣೆಯೊಂದಿಗೆ ತಿಳಿಸಿದರು.

ಮಂಜುಳಾಜಿ ಮಲೇಬೆನ್ನೂರಿನ  ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾಗಿ 15 ವರ್ಷಗಳಲ್ಲಿ 50 ವರ್ಷಗಳ ಸಾಧನೆ ಮಾಡುವ ಮೂಲಕ ಜನರಿಗೆ ಪರಮಾತ್ಮನ ಪರಿಚಯ ಸಾಕಷ್ಟು ಮಾಡಿಕೊಟ್ಟಿದ್ದಾರೆ. ಅವರ ದೇಹ ನಮ್ಮ ಜೊತೆ ಇರದಿದ್ದರೂ ಅವರ ಆತ್ಮ ನಮ್ಮೆಲ್ಲರ ಜೊತೆ ಸದಾ ಇರುತ್ತದೆ ಎಂದು ರಾಜಋಷಿ ಹೇಳಿದರು.

ಸನಾತನ ಭಾರತದಲ್ಲಿ ಪರಮಾತ್ಮನಿಗಾಗಿ ಹುಡುಕಲು ಯಾರೂ ಸಿದ್ದರಿರಲಿಲ್ಲ. ವಾಲ್ಮೀಕಿಗೂ ದೇವರು ದೊರಕಲಿಲ್ಲ.
ಓಂ ಶಾಂತಿ ಪರಿವಾರದವರಿಗೂ ಪರಮಾತ್ಮನ ದರ್ಶನವಾಗಲು
5 ಸಾವಿರ ವರ್ಷ ಬೇಕಾಯಿತೆಂದು ತಿಳಿಸಿದ ಬಸವರಾಜ ರಾಜಋಷಿ, ಪರಮಾತ್ಮ ಅಷ್ಟು ಸುಲಭವಾಗಿ ಎಲ್ಲರ ಕೈಗೆ ಸಿಗುವುದಿಲ್ಲ. ಪರಮಾತ್ಮನ ದರ್ಶನವಾಗಬೇಕಾದರೆ ಎಲ್ಲರೂ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಪಾಠ – ಪ್ರವಚನವನ್ನು ಕೇಳಬೇಕು ಎಂದು ಕರೆ ನೀಡಿದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಹರಿಹರ ತಾಲ್ಲೂಕಿನ ಶೇ.70 ರಷ್ಟು ಭಾಗದಲ್ಲಿ ಪರಮಾತ್ಮನ ವಿಚಾರ ಹರಡುವುದಕ್ಕೆ ಮಂಜುಳಾಜಿಯವರು ಕಾರಣರಾಗಿದ್ದರು. ಅವರು, ಮಲೇಬೆ ನ್ನೂರು, ಹೊಳೆಸಿರಿಗೆರೆ, ಹಾಲಿವಾಣದಲ್ಲಿ ಬ್ರಹ್ಮಾಕುಮಾರೀಸ್ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡಗಳನ್ನು ಕಟ್ಟಲು ಹಗಲಿರುಳು ಶ್ರಮಿಸಿದ್ದರು. ಅಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಯನ್ನೂ ಜನರಿಗೆ ತಿಳಿಸುವ ಪ್ರಯತ್ನ ಮಾಡುವ ಮೂಲಕ ಶ್ರಮದಿಂದ ಸಾಧನೆ ಎಂಬುದನ್ನು ಮಂಜುಳಾಜೀ ನಿರೂಪಿಸಿ ಹೋಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ದಾವಣಗೆರೆಯ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಯಾರಲ್ಲಿ ಉತ್ತಮ ಸಂಸ್ಕಾರ ಇರುತ್ತದೆಯೋ ಅವರಲ್ಲಿ ಮಾತ್ರ ಸಾರ್ಥಕ ಜೀವನ ಕಾಣಲು ಸಾಧ್ಯವಿದೆ. ಅಂತಹ ಸಾರ್ಥಕ ಜೀವನವನ್ನು ಮಂಜುಳಾಜೀ ಕಂಡು ಕೊಂಡಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಇಷ್ಟೊಂದು ಜನರೇ ಸಾಕ್ಷಿ ಎಂದು ಕೊಂಡಾಡಿದರು.

ಶುದ್ಧ ಭಾವನೆ ಇದ್ದಲ್ಲಿ ಉತ್ಕೃಷ್ಟ ಜೀವನ ಕಾಣಬಹುದು. ಪರಮಾತ್ಮನ ಸೇವೆ ಮಾಡುವ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಲ್ಲರಿಗೂ ಸದ್ಗತಿ ದೊರಕುತ್ತದೆ ಎಂದು ಸ್ವಾಮೀಜಿ ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿರಸಿ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯರಾದ ಬಿ.ಪಂಚಪ್ಪ, ಹೊಳೆಸಿರಿಗೆರೆಯ ಎನ್.ಜಿ.ನಾಗನಗೌಡ್ರು, ಹಾಲಿವಾಣದ ಎಸ್.ಜಿ.ಶಿವಕುಮಾರ್, ಬೆಂಗಳೂರಿನ ಬಿ.ಎಂ.ಕರೇಗೌಡ್ರು, ಹೆಚ್.ಎಸ್.ರುದ್ರಯ್ಯ ಅವರುಗಳು  ನುಡಿನಮನ ಸಲ್ಲಿಸಿದರು.

ಮಂಜುಳಾಜೀ ತಾಯಿ ಶ್ರೀಮತಿ ಚಿತ್ರಮ್ಮ, ಚಂದ್ರಶೇಖರ್ ಪೂಜಾರ್, ಜಿ.ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ತಳಸದ ಬಸವರಾಜ್, ಪೂಜಾರ್ ರೇವಣಪ್ಪ, ಡಾ. ಬಸವರಾಜ್ ಕಲಾಲ್, ಹೆಚ್.ಎಸ್.ವೀರಭದ್ರಯ್ಯ, ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ, ಬಂಗಾರದ ಅಂಗಡಿ ರಾಜು, ಕುಂಬಳೂರಿನ ಎಂ.ಹೆಚ್.ಮಹೇಂದ್ರ, ಬಿ.ಶಂಭುಲಿಂಗಪ್ಪ, ನಿರಂಜನ್, ಹಾಲಿವಾಣದ ಎಸ್.ಜಿ.ಪರಮೇಶ್ವರಪ್ಪ, ಶಿವಕ್ಳ ಆಂಜನೇಯ, ಕುಣೆಬೆಳಕೆರೆ ರಾಮು ಸೇರಿದಂತೆ ಅಪಾರ ಜನ ಭಾಗವಹಿಸಿದ್ದರು.

ಗಂಗಾವತಿ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸುಲೋಚನಾಜೀ ಸ್ವಾಗತಿಸಿದರು. 

ದಾವಣಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.   ಹೊಳೆಸಿರಿಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತಾಜೀ ವಂದಿಸಿದರು.

error: Content is protected !!