ಅನ್ನದಾತನಲ್ಲಿ ಆಶಾಕಿರಣ ಮೂಡಿಸಿದ ಮುಂಗಾರು ಪೂರ್ವ, 2.45 ಲಕ್ಷ ಹೆ. ಬಿತ್ತನೆ ಗುರಿ
ದಾವಣಗೆರೆ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಅನ್ನದಾತನಲ್ಲಿ ಹರ್ಷ ಮೂಡಿಸಿದೆ.
ಹಿಂದಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ನಿಗದಿತ ಬಿತ್ತನೆ ಗುರಿ ಪೂರ್ಣಗೊಂಡಿ ದ್ದರೂ, ವಾಡಿಕೆಯಷ್ಟು ಮಳೆ ಸುರಿಯದೆ ಬರ ಆವರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ‘ಬರಪೀಡಿತ’ವಾಗಿತ್ತು.
ಬಿತ್ತಿ ಬೆಳೆದಿದ್ದ ಫಸಲು ಕಣ್ಣೆದುರಿಗೇ ಒಣಗಿ ತೀವ್ರ ಸಂಕಷ್ಟದಲ್ಲಿದ್ದ ರೈತರಿಗೆ ಮುಂಗಾರು ಆಶಾಕಿರಣ ಮೂಡಿಸಿದೆ. ಈ ವರ್ಷದ ಮುಂಗಾರು ಉತ್ತಮವಾಗಲಿದೆ ಎಂಬ ಆಶಾಭಾವನೆಯಿಂದಲೇ ಕೃಷಿ ಕಾರ್ಯಗಳ ತಯಾರಿಯಲ್ಲಿದ್ದಾರೆ. ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ. ಬೀಜ, ಗೊಬ್ಬರದ ಲೆಕ್ಕಾಚಾರಗಳೂ ನಡೆಯುತ್ತಿವೆ.
2.45 ಲಕ್ಷ ಹೆಕ್ಟೇರ್ ಗುರಿ: ಕೃಷಿ ಇಲಾಖೆ ರೈತನ ನೆರವಿಗೆ ಸನ್ನದ್ಧವಾಗಿದೆ. ಬಿತ್ತನೆ ಬೀಜ-ಗೊಬ್ಬರದ ಅಭಾವ ಬಾರದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ 2,45,303 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಮೆಕ್ಕೆಜೋಳದಲ್ಲಿ ಅಕ್ಕಡಿ ಬೆಳೆಯಾಗಿ ತೊಗರಿ ಹಾಗೂ ಅವರೆ ಬೆಳೆಯುವಂತೆ ಪ್ರೋತ್ಸಾಹಿಸಿ ಯಶಸ್ಸನ್ನೂ ಕಂಡಿದ್ದ ಕೃಷಿ ಇಲಾಖೆ ಈ ವರ್ಷವೂ ಅಕ್ಕಡಿ ಬೆಳೆ ಪ್ರೋತ್ಸಾಹಿಸುವ ಚಿಂತನೆಯಲ್ಲಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 60,426 ಹೆಕ್ಟೇರ್, ಹರಿಹರ-32,280 ಹೆ., ಜಗಳೂರು- 57,418 ಹೆ., ಹೊನ್ನಾಳಿ-27,990 ಹೆ., ಚನ್ನಗಿರಿ; 46,194 ಹೆ. ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 20,995 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
24 ತಾಸಲ್ಲಿ 23.6 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ (ಮೇ 20ರ ಬೆಳಿಗ್ಗೆ 8.30 ರಿಂದ 21ರ ಬೆಳಿಗ್ಗೆ 8.30ರವರೆಗೆ) 23.6 ಮಿ.ಮೀ. ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 26 ಮಿ.ಮೀ., ದಾವಣಗೆರೆ 22.8, ಹರಿಹರ 22.36, ಹೊನ್ನಾಳಿ 16.5, ಜಗಳೂರಲ್ಲಿ ಅತಿ ಹೆಚ್ಚು 26.8 ಹಾಗೂ ನ್ಯಾಮತಿಯಲ್ಲಿ 20.2 ಮಿ.ಮೀ. ಮಳೆಯಾಗಿದೆ.
ಕಳೆದ ಏಳು ದಿನಗಳಲ್ಲಿ 77 ಮಿ.ಮೀ. ಮಳೆಯಾಗಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 104.5 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಮೇ 1 ರಿಂದ 21ರವರೆಗೆ ಜಿಲ್ಲೆಯಲ್ಲಿ 91.ಮಿ.ಮೀ. ಮಳೆಯಾಗಿದೆ. ಚನ್ನಗಿರಿ ಹಾಗೂ ನ್ಯಾಮತಿಯಲ್ಲಿ ಉತ್ತಮ ಮಳೆಯಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ಮೇ 14ರವರೆಗೆ ಶೇ.42ರಷ್ಟು ಮಳೆ ಕೊರತೆಯಾಗಿತ್ತು. ಏಪ್ರಿಲ್ ತಿಂಗಳಲ್ಲಿ ಶೇ 33ರಷ್ಟು ಮಳೆ ಕೊರತೆಯಾಗಿತ್ತು. ಆದರೆ ಮೇ ಮಾಹೆ ಮಳೆ ಕೊರತೆ ನೀಗಿಸಿದೆ.
ನಿಟ್ಟುಸಿರು ಬಿಟ್ಟ ತೋಟದ ಮಾಲೀಕರು
ಮಳೆ ಬಾರದೆ ಹಾಗೂ ಅಂತರ್ಜಲ ಕುಸಿತ ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಡಿಕೆ ಹಾಗೂ ತೆಂಗಿನ ತೋಟದ ಮಾಲೀಕರು ಫಸಲಿಗೆ ಬಂದಿದ್ದ ಮರಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಹಲವೆಡೆ ಟ್ಯಾಂಕರ್ ಮೂಲಕ ನೀರುಣಿಸಿ ತೋಟ ಉಳಿಸಿಕೊಳ್ಳಲಾಗಿತ್ತು. ಆದರೆ ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆ ತೋಟಗಳಿಗೆ ಕಳೆ ತಂದಿದೆ. ತೋಟಗಳ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ. ಅಡಿಕೆ ತೋಟಗಳು ಹೆಚ್ಚಾಗಿರುವ ಚನ್ನಗಿರಿಯಲ್ಲಿಯೇ ಉತ್ತಮ ಮಳೆಯಾಗಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಬಿತ್ತನೆ ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ. ಆದರೆ ರೈತರು ಲೂಸ್ ಬಿತ್ತನೆ ಬೀಜ ಖರೀದಿಸದೇ, ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಖರೀದಿಸಿ ಬಿತ್ತನೆ ಮಾಡಬೇಕು.
– ಶ್ರೀನಿವಾಸ್ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ.
ಜಿಲ್ಲೆಯಲ್ಲಿ ಭತ್ತ 65847 ಹೆಕ್ಟೇರ್, ಮೆಕ್ಕೆಜೋಳ 126108 ಹೆಕ್ಟೇರ್, ತೊಗರಿ 13500 ಹೆಕ್ಟೇರ್, ಶೇಂಗಾ 13770 ಹೆಕ್ಟೇರ್, ಹತ್ತಿ 7292 ಹೆಕ್ಟೇರ್ ಸೇರಿದಂತೆ ಹಲವು ಬೆಳೆಗಳ ಗುರಿ ಹೊಂದಲಾಗಿದೆ.
ಜಿಲ್ಲೆಗೆ ಒಟ್ಟಾರೆ ಮುಂಗಾರು ಹಂಗಾಮಿಗೆ 153683 ಮೆಟ್ರಿಕ್ ಟನ್ ಹಾಗೂ ಮೇ ಮಾಹೆಗೆ 23,154 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. 43646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುವುದಾಗಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ತಿಳಿಸಿದ್ದಾರೆ.
ಮುಂಗಾರು ಹಂಗಾಮಿಗೆ 53,238 ಮೆಟ್ರಿಕ್ ಟನ್ ಯೂರಿಯಾ, 18,060 ಮೆಟ್ರಿಕ್ ಟನ್ ಡಿಎಪಿ, 73,969 ಮೆಟ್ರಿಕ್ ಟನ್ ಎನ್.ಪಿ.ಕೆ.ಕಾಂಪ್ಲೆಕ್ಸ್, 4,851 ಮೆಟ್ರಿಕ್ ಟನ್ ಎಂಒಪಿ ಹಾಗೂ 3,565 ಮೆ. ಟನ್ ಎಸ್ಒಪಿ ಸೇರಿ ಒಟ್ಟು 1,53,683 ಮೆಟ್ರಿಕ್ ಟನ್ ಮುಂಗಾರು ಹಂಗಾಮಿಗೆ ಬೇಡಿಕೆ ಇರುವುದಾಗಿ ಅವರು ತಿಳಿಸಿದ್ದಾರೆ.
ಬಿತ್ತನೆ ಬೀಜಕ್ಕಿಲ್ಲ ಕೊರತೆ: ಪ್ರಸಕ್ತ ಮುಂಗಾರು ಹಂಗಾಮಿಗೆ 16010 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 17260 ಕ್ವಿಂ. ಲಭ್ಯವಿರುವುದಾಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಉಳಿದಂತೆ 25221 ಕವಿಂ. ಮುಸುಕಿನ ಜೋಳ, 980 ಕ್ವಿಂ.ಏಕದಳ, 776 ಕ್ವಿಂ.ದ್ವಿದಳ ಧಾನ್ಯ, 6806 ಕ್ವಿಂ. ಶೇಂಗಾ, 16 ಕ್ವಿಂ. ಸೂರ್ಯಕಾಂತಿ, 60 ಕ್ವಿಂ. ಹತ್ತಿ ಸೇರಿದಂತೆ ಜಿಲ್ಲೆಗೆ 49869 ಕ್ವಿಂ. ಬಿತ್ತನೆ ಬೀಜಗಳ ಅಗತ್ಯವಿದ್ದು, ಅಗತ್ಯಕ್ಕಿಂತ ಹೆಚ್ಚು ಅಂದರೆ 53650 ಕ್ವಿಂ. ಪ್ರಸ್ತುತ ಲಭ್ಯವಿದೆ ಎಂದವರು ಮಾಹಿತಿ ನೀಡಿದ್ದಾರೆ.