ಸೇವಾ ಯೋಜನೆ ಪ್ರಾರಂಭ, ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ನಾ. ಸೋಮೇಶ್ವರ
ಸಾತ್ವಿಕತೆಯಿಂದ ಕೆಟ್ಟ ಗುಣಗಳು ಕಡಿಮೆಯಾಗಿ ಉತ್ತಮ ಗುಣಗಳು ವೃದ್ಧಿಯಾಗುತ್ತವೆ.
– ಶ್ರೀ ಬಸವಪ್ರಭು ಸ್ವಾಮೀಜಿ
ದಾವಣಗೆರೆ, ಮೇ 19- ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ನೈರ್ಮಲ್ಯ ಕುರಿತು ಪೋಷ ಕರು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಲೇಖಕರೂ, `ಥಟ್ ಅಂತ ಹೇಳಿ’ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಸಿಹಿ ಪ್ರಕಾಶನದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಭಾನುವಾರ ನಡೆದ `ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ’ ಸೇವಾ ಯೋಜನೆಯ ಪ್ರಾರಂಭೋತ್ಸವ ಮತ್ತು ಲೇಖಕ ಶಿವಪ್ರಸಾದ ಕರ್ಜಗಿ ಅವರ ಪ್ರಸಾದವಾಣಿ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮುಂದೆ ನೈರ್ಮಲ್ಯದ ಕುರಿತು ಭಾಷಣ ಬಿಗಿಯದೆ, ಸ್ವಚ್ಛತಾ ಕಾರ್ಯ ಕೈಗೊಂಡು ತೋರಿಸಬೇಕು. ಸ್ವಚ್ಛ ಮತ್ತು ಸ್ವಸ್ಥ ಸಮಾಜದ ಮಹತ್ವವನ್ನು ತಿಳಿಸಿ ಮರು ಜಾಗೃತಿಗೊಳಿಸಬೇಕು ಎಂದು ಸಲಹೆ ನೀಡಿದರು.
ಇಂದ್ರನ ವಜ್ರಾಯುಧದಷ್ಟೇ ಶಕ್ತಿಶಾಲಿಯಾಗಿ ರುವ ಮನುಷ್ಯನ ಇಂದ್ರಿಯಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ನಮ್ಮಲ್ಲಿರುವ ಬುದ್ಧಿಯ ಮಾತನ್ನು ಮನಸ್ಸು ಕೇಳಿದಾಗ ಮಾತ್ರ ಇವುಗಳನ್ನು ನಿಯಂತ್ರಿಸಲು ಸಾಧ್ಯ. ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಬೇಕಾದರೆ ನಮ್ಮ ದೇಹದೊಳಗಿನ ಪಂಚೇಂದ್ರಿಯಗಳು, ಮನಸ್ಸು ಮತ್ತು ಆತ್ಮ ಪ್ರಸನ್ನವಾಗಿರಬೇಕು ಎಂದು ಪ್ರತಿಪಾದಿಸಿದರು.
ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಬುದ್ಧಿ ಶುದ್ಧಿಯಾದರೆ ಸಿದ್ಧಿ ಸಿಗಲಿದೆ. ಆಧ್ಯಾತ್ಮದಲ್ಲಿ ಪ್ರವೇಶಿಸಿದರೆ ಸಾತ್ವಿಕತೆ ಬರುತ್ತದೆ ಎಂದರು.
ಸಾತ್ವಿಕತೆಯಿಂದ ಕೆಟ್ಟ ಗುಣಗಳು ಕಡಿಮೆ ಯಾಗಿ, ಉತ್ತಮ ಗುಣಗಳು ವೃದ್ಧಿಯಾಗುತ್ತವೆ. ಸಾತ್ವಿಕತೆಯ ಕಾರಣಕ್ಕಾಗಿಯೇ ಬುದ್ಧ, ಬಸವ, ಅಕ್ಕಮಹಾದೇವಿ ಪ್ರಸಿದ್ಧಿಯಾಗಿದ್ದಾರೆ ಎಂದರು.
ಮನುಷ್ಯನಲ್ಲಿರುವ ದುರ್ಬುದ್ಧಿಯ ವರ್ತನೆಯಿಂದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯಂತಹ ದುಷ್ಕೃತ್ಯ ನಡೆಯುತ್ತಿವೆ ಎಂದು ಸ್ವಾಮೀಜಿ ವಿಷಾದಿಸಿದರು.
ಪ್ರಸಾದವಾಣಿ ಕೃತಿಯ ಲೇಖಕ ಶಿವಪ್ರಸಾದ ಕರ್ಜಗಿ ಅವರಂತಹ ಯುವ ಲೇಖಕರನ್ನು ಬೆಳೆಸಬೇಕಾದರೆ ಕೃತಿಗಳನ್ನು ಖರೀದಿಸಿ ಓದಬೇಕು. ಈ ನಿಟ್ಟಿನಲ್ಲಿ ನಾವು 100 ಕೃತಿ ಖರೀದಿಸಿ, ಮಠಕ್ಕೆ ಬರುವ ಭಕ್ತರಿಗೆ ನೆನಪಿನ ಕಾಣಿಕೆ ನೀಡುತ್ತೇವೆ. ನೀವು ಸಹ ಪುಸ್ತಕ ಖರೀದಿಸಿ ಶುಭ ಸಮಾರಂಭಗಳಿಗೆ ಹೋದಾಗ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವುದೇಶದಲ್ಲಿ 10 ಸಾವಿರ ಹಾಗೂ ವಿದೇಶಗಳಲ್ಲಿ 500 ಸೇವಾ ಕೇಂದ್ರಗಳ ಮೂಲಕ ನೈತಿಕ ಮತ್ತು ಚಾರತ್ರಿಕ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯು ಯಾವುದೇ ಮತ, ಜಾತಿ, ಲಿಂಗ ಭೇದವಿಲ್ಲದೇ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ಕೆಲವರು ಆಧ್ಯಾತ್ಮ ಮತ್ತು ಧರ್ಮ ಬೇರೆ, ಬೇರೆಯಾಗಿದ್ದರೂ ಅವುಗಳನ್ನು ಬೆರೆಸಿ ಕಚ್ಚಾಡುತ್ತಿದ್ದಾರೆ. ಶಾಂತಿಯೇ ನಿಜವಾದ ಧರ್ಮವಾಗಿದೆ ಎಂದು ಹೇಳಿದರು.
ಡಾ.ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸ್ವಾಮಿ ನಾರಾಯಣಾನಂದ ಸರಸ್ವತಿ ಸಾನ್ನಿಧ್ಯವನ್ನು ರಾಜಯೋಗಿನಿ ಅನಸೂಯಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಮಂಜುನಾಥ್, ಬೆಂಗಳೂರಿನ ಕಸಾಪದ ನೇ.ಭ. ರಾಮಲಿಂಗ ಶೆಟ್ಟಿ, ಸಾಹಿತಿ ಶಿವಯೋಗಿ ಹಿರೇಮಠ, ರಾಜೇಂದ್ರಪ್ರಸಾದ್ ನೀಲಗುಂದ, ಕೆ.ವಿ. ಧರಣೇಶ್ ಉಪಸ್ಥಿತರಿದ್ದರು.