ರಾಜ್ಯದಲ್ಲಿ ಅಮಾನವೀಯ ಪ್ರಕರಣ ಹೆಚ್ಚಳ

ರಾಜ್ಯದಲ್ಲಿ ಅಮಾನವೀಯ ಪ್ರಕರಣ ಹೆಚ್ಚಳ

ಮಡಿವಾಳ ಸಮುದಾಯದಿಂದ ಪ್ರತಿಭಟನೆ, ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ದಾವಣಗೆರೆ, ಮೇ 20-  ರಾಜ್ಯದಲ್ಲಿ ನಡೆದ ಕೊಪ್ಪಳ ಜಿಲ್ಲಾ ಕಿನ್ನಾಳ ಗ್ರಾಮದ ಅಪ್ರಾಪ್ತೆ ಬಾಲಕಿ ಅನುಶ್ರೀ ಮೇಲಿನ ವಾಮಾಚಾರದ ಬಲಿ, ಹುಬ್ಬಳ್ಳಿ ನಗರದ ನೇಹಾ ಹಿರೇಮಠ್‌ ಮತ್ತು ಅಂಜಲಿ ಅಂಬಿಗರ ಇವರನ್ನು ಹತ್ಯೆಗೈದ ಆರೋಪಿಗಳನ್ನು ಹಾಗೂ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹಣಮಂತನ ಮೇಲೆ ಹಲ್ಲೆ ಮಾಡಿರುವ ಹಲ್ಲೆಕೋರರನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಲು ಒತ್ತಾಯಿಸಿ, ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘವು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.

ನಗರದ ಜಯದೇವ ವೃತ್ತದಿಂದ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ಮಡಿವಾಳ ಸಮುದಾಯದ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ರವಾನಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವತಿಯರು, ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಹೆದರುವ ವಾತಾವರಣ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆ ಸೂಕ್ತ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಇದಲ್ಲದೇ ಈ ಎಲ್ಲಾ ಪ್ರಕರಣಗಳಲ್ಲಿ ಅಮಾನವೀಯ, ವಿಕೃತವಾಗಿ ವರ್ತನೆ ಮಾಡಿರುವ ಎಲ್ಲಾ ಆರೋಪಿಗಳನ್ನು ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹುಲಿಕಟ್ಟೆ ರಾಮಚಂದ್ರಪ್ಪ, ಎಂ.ವೈ.ಸತೀಶ್, ಜಿ.ಕಿಶೋರ್ ಕುಮಾರ್,
ಆರ್.ಎನ್.ಮಾರುತಿ, ಅಂಜಿನಪ್ಪ ಪೂಜಾರ್, ಜಿ.ವಿಜಯ ಕುಮಾರ್, ಹನುಮಂತಪ್ಪ, ಕಕ್ಕರಗೊಳ್ಳ ಮಂಜುನಾಥ್, ಅಣಜಿ ಹನುಮಂತಪ್ಪ, ಐಗೂರು ಅಂಜಿನಪ್ಪ, ಅರಸೀಕೆರೆ ಬಸವರಾಜ್, ರವಿ ಚಿಕ್ಕಣ್ಣ, ಮಧುರಾ, ನಾಗಮ್ಮ, ಡೈಮಂಡ್ ಮಂಜುನಾಥ್, ಗೋಪಾಲ್, ಕೃಷ್ಣಮೂರ್ತಿ, ರವಿ, ಬಾತಿ ಶಂಕರ್, ಸುಭಾಷ್, ರಾಜಣ್ಣ, ಎಂ.ಕೆ.ಬಸವರಾಜ್ ಇತರರು ಇದ್ದರು.

error: Content is protected !!